ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಳಿಸುವ ಭರದಲ್ಲಿ ಕಳೆದು ಹೋಗ್ತಿವೆ ಗುಬ್ಬಚ್ಚಿ ಭಾವಗಳು

Vishwanath S
Updated On : 26 Feb 2014, 11:18 am

ಕನ್ನಡಪ್ರಭ ವಾರ್ತೆ, ಗದಗ, ಫೆ. 25
ಜೀವನದ ಸಣ್ಣ ಸಣ್ಣ ನೆಮ್ಮದಿಯ ಕ್ಷಣಗಳ ಪ್ರತೀಕವಾದ ಗುಬ್ಬಚ್ಚಿ ಪಕ್ಷಿಯ ಸಂಕೇತದ ಪ್ರೀತಿಯ ಗುಬ್ಬಚ್ಚಿಯ ಕವನದ ಸಾಲು ಬೇಸರವಾಗಿದೆ. ಯಾಕೋ ಏನೋ ನೀನಿಲ್ಲದ ಈ ಬಾಳು ಎನ್ನುವ ಡಾ. ನಿಂಗಪ್ಪ ಮುದೇನೂರ ಅವರ ಕವನದ ಸಾಲುಗಳು ಕವಿ ಕುಂಚ ಗಾಯನ ಕಾರ್ಯಕ್ರಮದ ದಿಕ್ಕನ್ನು ಇಂದಿನ ಮಾನವ ಜೀವನದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಳಿಸುವ ಭರದಲ್ಲಿ ಕಳೆದುಕೊಳ್ಳುತ್ತಿರುವುದನ್ನು ಪ್ರತಿಬಿಂಬಿಸುತ್ತಿದ್ದು ವಿಶೇಷವಾಗಿತ್ತು.
ಸೋಮವಾರ ಸಂಜೆ ಲಕ್ಕುಂಡಿ ಉತ್ಸವದ ಕವಿ ಕುಂಚ ಗಾಯನ ಕಾಯಕ್ರಮದ ಆಶಯ ಭಾಷಣ ಮಾಡಿದ ಡಾ. ನಿಂಗಪ್ಪ ಮುದೇನೂರ ಅವರು ಕನ್ನಡ ಕಾವ್ಯ ಹಾಗೂ ಅದರ ಇತಿಹಾಸ ಕುರಿತು ಮಾತನಾಡಿದರು. 12ನೇ ಶತಮಾನದಲ್ಲಿ ವಚನಗಳ ಮೂಲಕ ಜನಸಾಮಾನ್ಯರ ಆಶಯಗಳನ್ನು ಪ್ರತಿಬಿಂಬಿಸುವ ಮಾಧ್ಯಮವಾಯಿತು ಎಂದರು.
ಕವಿ ಕುಂಚ ಗಾಯನದಲ್ಲಿ ಅನ್ನದಾನಿ ಹಿರೇಮಠ ಈ ದೇಶವೆಂದರೆ ಈ ದೇಹ ಕವನ ಒಂದು ರಾಷ್ಟ್ರ ಹಾಗೂ ಅದರ ಪ್ರಜೆಗಳ ಅವಿನಾಭಾವ ವಿವರಿಸಿದರೆ, ಸದಾಶಿವ ದೊಡ್ಡಮನಿ ಅವರ ಮೊದಲಿಗೆ ಕಂಡಾಗ ಮೊಗ್ಗದ ಮನರಾಗ ಎನ್ನುವ ಕವನ ಜೀವದ ಗೆಳತಿಯ ಪ್ರೀತಿಯನ್ನು ಕಾಣುವ ಹಾಗೂ ಭಾವಿಸುವ ಪರಿಯನ್ನು ತಿಳಿಸಿದರೆ, ವಿನಾಯಕ ಕಮತರ ಅವರ ಕೋಟಿ ಜನ್ಮಕ್ಕೂ ಎನ್ನುವ ಹಾಡು ಭಾವ ಸಂಗಾತಿಯ ಪ್ರೀತಿಯ ನವಿರಾದ ಭಾವನೆಗಳ ದೃಶ್ಯ ಕಾವ್ಯವಾಗಿ ಮೂಡಿ ಬಂತು.
ನಿರ್ಮಲಾ ಶೆಟ್ಟರ್ ಅವರ ಬೆಳಕಿನೊಡನೆ ಪಯಣ ಕವನದ ಎದೆಯೊಳಗಿನ ಪ್ರೀತಿ ಜೇನಾಗಿ ಜಿನುಗಲಿ....ಬೆಂಬತ್ತಿದ ನೋವು ಆಚೆಗಿರಲಿ. ನಿನ್ನ ಪ್ರೀತಿಯ ಬುತ್ತಿ ಕಸುವಾಗಿ ನಗಲಿ ಎಂಬ ಸಾಲುಗಳು ವ್ಯಕ್ತಿಯು ಪ್ರೀತಿಗಾಗಿ ವಿಶ್ವಾಸಕ್ಕೆ ಹಂಬಲಿಸುವ ಪರಿಯನ್ನು ಸವದತ್ತಿಯ ವೈ.ಎಂ. ಯಾಕೊಳ್ಳಿ ಅವರ ದುಡಿಮೆ ಕವನ ಶ್ರಮಿಕರ ಜೀವನದ ಸಂಘರ್ಷದ ಮಜಲುಗಳನ್ನು ಎತ್ತಿ ತೋರಿದವು. ಮಂಜುನಾಥ ಬೊಮ್ಮನಕಟ್ಟಿ ಅವರು ಏನ ಹೇಳಿ ಮೈಮಾಟ ನಾ ಹ್ಯಾಂಗ ತಾಳಲಿ ಪರಿಪಾಟ ಎನ್ನುವ ಕವನ ಗ್ರಾಮೀಣ ಮಹಿಳೆಯರ ಎಲೆಮರೆಯ ಬಾಹ್ಯ ಸೌಂದರ್ಯ ಜತೆಗೆ ಆ ಮನದಾಳದ ತುಮುಲಗಳನ್ನು ಸಂಗ್ರಹಿಸಿ ನೀಡಿತು.
ಹೊಸಪೇಟೆಯ ಜಿ. ಶಿವಕುಮಾರ ಅವೆ ಏಕಾಂಗಿ ನಾನಲ್ಲ, ಒಂಟಿತನ ನನಗಿಲ್ಲ ಕವನ ಬಾಳ ಸಂಗಾತಿಯ ಮಹತ್ವ ವಿವರಿಸಿದರೆ, ಮಂಜುಳಾ ವೆಂಕಟೇಶಯ್ಯ ಅವರ ಸಪ್ತಪದಿಯನ್ನು ತುಳಿದಾಗ, ಭಾವಪಲ್ಲವಿ ನುಡಿ, ಭಾವ ಬಂಧದಿ ಬೆಸೆದು ಎನ್ನುವ ಕವನ ಸಂಸ್ಕಾರದ ಗೆಲುಮೆಯ ಮರ್ಮ ಮೂಡಿಸಿತು.
ಕವಿ ಕುಂಚ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ವಸ್ತ್ರದ ಮಾತನಾಡಿ, ಹಳಗನ್ನಡ ವಚನದ ಕವಿಕುಂಚ ಗಾಯನ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ಮೂಡಿಬರಲಿ. ಮನಸ್ಸಿನ ಭಾವನೆಗಳ ಅಕ್ಷರಗಳಿಗೆ ರಾಗ ಹಾಗೂ ಭಾವಗಳಿಗೆ ಬಣ್ಣ ನೀಡುವ ಕವಿ ಕುಂಚ ಗಾಯನ ವಿಶಿಷ್ಟವಾಗಿ ಪ್ರಥಮ ಬಾರಿ 1992ರಲ್ಲಿ ಧಾರವಾಡದಲ್ಲಿ ಪ್ರಾರಂಭಗೊಂಡಿತು ಎಂದರು. ಶಾಂತಕುಮಾರ ಭಜಂತ್ರಿ ಹಾಗೂ ಪ್ರಿಯಾಂಕಾ ಹಿರೇಮಠ ನಿರೂಪಿಸಿದರು.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement