ವಿಜಯನಗರ ಶುಗರ್ಸ್ ಹೆಸರು ಬದಲಾಯಿಸಿ: ಕರವೇ ಮನವಿ
ಮುಂಡರಗಿ: ತಾಲೂಕಿನ ಗಂಗಾಪುರ ಗ್ರಾಮದ ಹತ್ತಿರವಿರುವ ವಿಜಯನಗರ ಶುಗರ್ಸ್ನ ಹೆಸರನ್ನು ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಂತಾ ಮರುನಾಮಕರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ್ರ ಬಣ ಅಧ್ಯಕ್ಷ ಶಿವಾನಂದ ಬಾರಕೇರ ಅವರ ನೇತೃತ್ವದಲ್ಲಿ ತಹಸೀಲ್ದಾರ್ಗೆ ಮಂಗಳವಾರ ಮನವಿ ನೀಡಲಾಯಿತು. ಈ ಭಾಗದ ಐಟಿಐ, ಡಿಪ್ಲೋಮ, ಬಿಇ, ಬಿಕಾಂ, ಬಿಎಸ್ಡಬ್ಲ್ಯು, ಜೆಒಡಿಸಿ ಪದವಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಹತೆಗನುಗಣವಾಗಿ ಉದ್ಯೋಗ ನೀಡಬೇಕು, ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. ಕರವೇ ಕಾರ್ಯಕರ್ತ ಶಂಕರಗೌಡ ಪಾಟೀಲ ಮಾತನಾಡಿ, ಎಸ್.ಎಸ್. ಪಾಟೀಲ ಸಚಿವರಾಗಿದ್ದ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದಾಗ ಇಲ್ಲಿನ ಜನತೆಗೆ ಹಾಗೂ ರೈತರಿಗೆ ಸಾಕಷ್ಟು ಸಂತೋಷವಾಗಿತ್ತು. ಕಾರ್ಖಾನೆ ಸ್ಥಾಪನೆಯಿಂದಾಗಿ ನಮ್ಮ ಮಕ್ಕಳಿಗೆ ಇಲ್ಲಿ ಉತ್ತಮವಾದ ಉದ್ಯೋಗ ದೊರೆಯುತ್ತದೆ ಎನ್ನುವ ಆಶಾಭಾವನೆ ಇಟ್ಟುಕೊಂಡಿದ್ದರು. ಆದರೆ, ಇಂದು ಆ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಸಣ್ಣ ಸಣ್ಣ ಹುದ್ದೆ, ಸಿಪಾಯಿ ಕೆಲಸಗಳಿಗೆ ಮಾತ್ರ ಸಮಾಧಾನ ಮಾಡಲಾಗುತ್ತಿದೆ. ಈ ಕೂಡಲೇ ತಹಸೀಲ್ದಾರರು ಕಾರ್ಖಾನೆಗೆ ಸಂಬಂಧಪಟ್ಟವರನ್ನು ಕರೆದು ಮಾತನಾಡಿಸಿ ತಮ್ಮ ಈ ಬೇಡಿಕೆಗಳ ಬಗ್ಗೆ ತಿಳಿಸಬೇಕು. ನಾಮಕರಣ ಬದಲಾವಣೆ ಮಾಡದಿದ್ದಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ. ಎಂದರು. ತಾಲೂಕು ಕರವೇ ಅಧ್ಯಕ್ಷ ಶಿವಾನಂದ ಬಾರಕೇರ, ಅಲ್ಲಾಭಕ್ಷಿ ಅಳವಂಡಿ, ಮಂಜುನಾಥ ಇಟಗಿ, ಗವಿಸಿದ್ದಪ್ಪ ಭಜಂತ್ರಿ, ಅಂದಪ್ಪ ಚಿಕ್ಕನ್ನವರ, ಶಿವು ಮಡಿವಾಳರ, ದೇವಪ್ಪ ಇಟಗಿ, ಮೋಯಿದ್ದೀನ ತಳಗಡೆ, ಸ್ವಾಮಿ ಸತ್ತಮ್ಮನವರ, ಅಭಿಷೇಕ ಶಿಂಘೆ, ಸುಭಾಷ ಗುಡಿಮನಿ ಇದ್ದರು.