ಸಂಸ್ಕೃತಿ ಉಳಿವಿಗೆ ಉತ್ಸವ ಸಹಕಾರಿ
ಗದಗ: ಸಾಂಸ್ಕೃತಿಕ ಸಾಹಿತ್ಯ ಉಳಿವಿಗೆ ಉತ್ಸವಗಳು ಸಹಕಾರಿಯಾಗಿವೆ ಎಂದು ಸಂಸದ ಪಿ.ಸಿ. ಗದ್ದಿಗೌಡ್ರ ಹೇಳಿದರು.
ಅವರು ಸೋಮವಾರ ರಾತ್ರಿ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತ ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಫೆ. 22ರಿಂದ ಪ್ರಾರಂಭವಾಗಿದ್ದ ಲಕ್ಕುಂಡಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇತಿಹಾಸ ತಜ್ಞ ಅ.ದ. ಕಟ್ಟಿಮನಿ ಮಾತನಾಡಿ, ಲಕ್ಕುಂಡಿಯ ದೇವಾಲಯಗಳ ಕುರಿತ ಇತಿಹಾಸದ ಮಹತ್ವ ಹಾಗೂ ರಚನಾ ಶೈಲಿಗಳ ಕುರಿತು ಮಾಹಿತಿ ನೀಡಿದರು.
ಯುನೆಸ್ಕೊ ಪಟ್ಟಿಗೆ ಸೇರಿಸಲು ಯತ್ನ: ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಲಕ್ಕುಂಡಿಯನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲು ಯತ್ನಿಸಲಾಗುತ್ತಿದೆ. ಇದಕ್ಕೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶದಿಂದ ಗ್ರಾಮದಲ್ಲಿ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಇದಕ್ಕಾಗಿ ಸರ್ಕಾರದಿಂದ ರು. 1 ಕೋಟಿ ಅನುದಾನ ತರಲಾಗುತ್ತಿದೆ. ಲಕ್ಕುಂಡಿ ಮೇರು ಇತಿಹಾಸ, ಆ ಕಾಲದ ಸಾಹಿತ್ಯ, ಸಂಸ್ಕೃತಿಯನ್ನು ವಿದೇಶಿಗರು, ಪ್ರವಾಸಿಗರಿಗೆ ತಿಳಿಸುವುದು, ನಾವೂ ಅಧ್ಯಯನ ಮಾಡುವುದು ಅಗತ್ಯ ಎಂದರು.
ನರಗುಂದ ಹಿರೇಮಠದ ಸಿದ್ಧಲಿಂಗಾಚಾರ್ಯ ಶ್ರೀಗಳು, ಪತ್ರಿವನದ ಸಿದ್ಧವೀರ ಶಿವಾಚಾರ್ಯ ಶ್ರೀಗಳು, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಶರಣಪ್ಪ, ಜಿಪಂ ಸಿಇಒ ವೀರಣ್ಣ ತುರಮರಿ, ಗದಗ ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಗದಗ ತಾಪಂ ಅಧ್ಯಕ್ಷ ಹನುಮಪ್ಪ ಇಂಗಳಹಳ್ಳಿ, ಉಪಾಧ್ಯಕ್ಷೆ ಪ್ರತಿಭಾ ಸಿದ್ರಾಮಣ್ಣವರ, ಗದಗ ಜಿಪಂ ಸದಸ್ಯೆ ಚಂಬವ್ವ ಪಾಟೀಲ, ತಾಪಂ ಸದಸ್ಯ ಮಹೇಶ ಮುಸುಕಿನಬಾವಿ, ಲಕ್ಕುಂಡಿ ಗ್ರಾಪಂ ಅಧ್ಯಕ್ಷೆ ಶಾಂತವ್ವ ನಂದೆಪ್ಪನವರ, ಉಪಾಧ್ಯಕ್ಷೆ ರೇಣವ್ವ ಮುಳ್ಯಾಳ, ಸದಸ್ಯ ಮಹೇಶ ಮುಸ್ಕಿನಭಾವಿ, ದಶರಥ ಗಾಣಿಗೇರ, ಉಪಕಾರ್ಯದರ್ಶಿ ಷಡಕ್ಷರಪ್ಪ, ಉಪವಿಭಾಗಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ಚಂಬಣ್ಣ ವಾಳದ, ಎಂ.ಎನ್. ಉಮಚಗಿ, ಗದಗ ಶಹರ ಬಿಇಒ ಐ.ಬಿ. ಬೆನಕೊಪ್ಪ ಮುಂತಾದವರು ಇದ್ದರು. ಗದಗ ಎಪಿಎಂಸಿ ಉಪಾಧ್ಯಕ್ಷ ಸಿದ್ದು ಪಾಟೀಲ ಸ್ವಾಗತಿಸಿದರು. ಬಾಹುಬಲಿ ಜೈನರ ಹಾಗೂ ಷಹಜಾನ ಮುದಕವಿ ನಿರೂಪಿಸಿದರು.
ನಿರ್ಣಯ ಈಡೇರಿಸದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮನಸ್ಸಾಗಲಿಲ್ಲ
ಮುಂಡರಗಿ: ಮುಂಡರಗಿಯಲ್ಲಿ ಗದಗ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು 8 ತಿಂಗಳು ಗತಿಸಿದರೂ ಆ ಸಮ್ಮೇಳದ ಒಂದೂ ನಿರ್ಣಯ ಈವರೆಗೂ ಈಡೇರಿಸಿಲ್ಲ. ಇದು ತುಂಬಾ ನೋವು ತಂದಿರುವುದರಿಂದ ರೋಣದಲ್ಲಿ ನಡೆದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮನಸ್ಸಾಗಲಿಲ್ಲ ಎಂದು ಗದಗ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಖೇದ ವ್ಯಕ್ತಪಡಿಸಿದರು. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಡರಗಿಯಲ್ಲಿ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 2000ರಲ್ಲಿ ನಡೆಯಿತು. ಈ ಸಮ್ಮೇಳನದ ನೆನಪಿಗಾಗಿ ಶ್ರೀಮಠದಿಂದ ಕೋಟ್ಯಂತರ ರು. ಬೆಲೆಬಾಳುವ 9 ಗುಂಟೆ ಜಾಗೆಯನ್ನು ಸಾಹಿತ್ಯ ಭವನ ನಿರ್ಮಾಣಕ್ಕಾಗಿ ದಾನಮಾಡಲಾಗಿದೆ. ಸಾಹಿತ್ಯ ಭವನಕ್ಕೆ ಭೂಮಿ ದಾನಮಾಡಿ 13 ವರ್ಷಗಳಾದರೂ ಇಂದಿಗೂ ಸಾಹಿತ್ಯಭವನ ನಿರ್ಮಾಣವಾಗಿಲ್ಲ. ಸಾಹಿತ್ಯಭವನ ನಿರ್ಮಾಣದ ಕಾರ್ಯ ಸರ್ಕಾರಕ್ಕೆ ಹೊರೆ ಆಗಲಾರದು. ಇಚ್ಛಾಶಕ್ತಿಯ ಕೊರತೆಯಿಂದ ಇದು ನೆನೆಗುದಿಗೆ ಬೀಳುತ್ತಿದೆ ಎಂದರು. ಕಳೆದ ವರ್ಷ ಜೂನ್ 15, 16ರಂದು ಮುಂಡರಗಿಯಲ್ಲಿ ಗದಗ ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಾಹಿತ್ಯ ಭವನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಜೂನ್ 2014ರೊಳಗೆ ನಿರ್ಮಾಣ ಕಾರ್ಯ ಮುಗಿಯಬೇಕು ಎಂದು ಹೇಳಿದ್ದರು. ಆದರೆ, ಸಮ್ಮೇಳನ ನಡೆದು 8 ತಿಂಗಳು ಕಳೆದರೂ ಭವನದ ನಿರ್ಮಾಣ ಕಾರ್ಯ ನಡೆದಿಲ್ಲ. ಶ್ರೀಮಠದಿಂದ 225 ಪುಸ್ತಕಗಳು ಪ್ರಕಟಗೊಂಡಿವೆ. ಈ ಎಲ್ಲ ಪುಸ್ತಕಗಳು ಓದುಗರ ಕೈಗೆ ಸಿಗುವಂತೆ ಮತ್ತು ನಾಡಿನ ಹೆಸರಾಂತ ಸಾಹಿತಿಗಳ ಬದುಕು-ಬರಹ ಕುರಿತು ಚಿಂತನ-ಮಂಥನ ನಡೆಯುವಂತಹ ವ್ಯವಸ್ಥೆಯನ್ನು ಸಾಹಿತ್ಯಭವನದಲ್ಲಿ ಮಾಡಿದರೆ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಕಪ್ಪತಗುಡ್ಡ ಸಂರಕ್ಷಣಾ ಪ್ರಾಧಿಕಾರ ರಚನೆಯಾಗಬೇಕು ಎಂದು 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದೂ ಕೈಗೂಡಲಿಲ್ಲ ಎಂದರು.
ದೀಕ್ಷಿತ್ ಮೋಡಿಗೆ ದಿಲ್ಖುಷ್
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಫೆ. 22ರಿಂದ 3 ದಿನಗಳ ವರೆಗೆ ಏರ್ಪಡಿಸಿದ್ದ ಲಕ್ಕುಂಡಿ ಉತ್ಸವಕ್ಕೆ ಸೋಮವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ರಘು ದೀಕ್ಷಿತ್ ಮತ್ತು ಕಲಾತಂಡದ ಸಂಗೀತ ತಾಳಕ್ಕೆ ಪ್ರೇಕ್ಷಕರು ಕೇಕೇ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮದೊಂದಿಗೆ ತೆರೆ ಬಿದ್ದಿತು.
ಸಮಾರೋಪ ಸಮಾರಂಭದ ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾತ್ರಿ 10ಕ್ಕೆ ರಘು ದಿಕ್ಷಿತ್ ಹಾಗೂ ಕಲಾ ತಂಡದಿಂದ ಪ್ರಾರಂಭವಾದ ರಸಸಂಜೆ ಕಾರ್ಯಕ್ರಮದಲ್ಲಿ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ತನ್ನ ವಿಶಿಷ್ಟ ಉಡುಪುಗಳ ಮೂಲಕ ಗಮನ ಸೆಳೆದ ದೀಕ್ಷಿತ್ ಮುಖ್ಯ ವೇದಿಕೆಗೆ ಆಗಮಿಸಿ ಮೊದಮೊದಲಿಗೆ ಸಂತಶಿಶುನಾಳಧೀಶರ ಗುಡುಗುಡಿಯಾ ಸೇದಿ ನೋಡೋ.....ಹಾಡಿಗೆ ಪ್ರೇಕ್ಷಕರು ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು.
ನಂತರ ಸಂತಶಿಶುನಾಳರ ಮತ್ತೊಂದು ಗೀತೆಯಾದ ಯಾಕಪ್ಪ ಚಿಂತಿ ಮಾಡ್ತಿ......ಹಾಡನ್ನು ಪ್ರೇಕ್ಷಕರಿಂದಲೇ ಹಾಡಿಸುವ ಮೂಲಕ ದೀಕ್ಷಿತ್ ಪ್ರೇಕ್ಷಕರೊಂದಿಗೆ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ನಂತರ ದೀಕ್ಷಿತ್ ತಮ್ಮ ವಿಶಿಷ್ಟ ಸಂಗೀತದ ಮೂಲಕ ಕೊಡಗನ ಕೊಳಿ ನುಂಗಿತ್ತ ನೋಡವ್ವಾ ತಂಗಿ ಕೋಡಗನ ಕೊಳಿ ನುಂಗಿತ್ತ..... ಹಾಡಿಗೆ ಮಹಿಳೆಯರು ಸೇರಿದಂತೆ ವೃದ್ಧರು, ಯುವಕರು, ಅಧಿಕಾರಿಗಳು ಮುಖ್ಯವೇದಿಕೆಯ ಮುಂಭಾಗದಲ್ಲಿ ಕುಣಿದು ಸಂಭ್ರಮಿಸಿದರು. ಸಂಗೀತ ಲೋಕದಲ್ಲಿ ದೀಕ್ಷಿತ್ಗೆ ಯಶಸ್ಸು ಕೊಟ್ಟ ಸೈಕೋ ಚಲನಚಿತ್ರದ ನಿನ್ನ ಪೂಜೆಗೆ ಬಂದೆ ಮಾದೇಶ್ವರಾ.....ಮತ್ತು ನೀ ಬೇಕು.... ಜಸ್ಟ್ ಮಾತಮಾತಲ್ಲಿ ಚಲನಚಿತ್ರದ ಜಸ್ಟ ಮಾತಮಾತಲ್ಲಿ.... ಗೀತೆಯನ್ನು ಹಾಡಿ ಸಂಗೀತಾಸಕ್ತರಿಗೆ, ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದರು.
ಹಲವು ಕಾರ್ಯಕ್ರಮಗಳು: ಲಕ್ಕುಂಡಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಹಲವು ವಿಧಾಯಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ಕಾವ್ಯ ಕುಂಚ ಗಾಯನ ಕಾರ್ಯಕ್ರಮದಲ್ಲಿ ಕವಿ ಅನ್ನದಾನಿ ಹಿರೇಮಠ, ಡಾ. ಸದಾಶಿವ ದೊಡಮನಿ, ವಿನಾಯಕ ಕಮತದ, ನಿರ್ಮಲಾ ಶೆಟ್ಟರ್, ಡಾ. ವೈ.ಎಂ. ಯಾಕೊಳ್ಳಿ, ಮಂಜುನಾಥ ಬೊಮ್ಮನಕಟ್ಟಿ, ಜಿ.ಶಿವಕುಮಾರ, ಮಂಜುಳಾ ವೆಂಕಟೇಶಯ್ಯ ಕವಿಗಳು ರಚಿಸಿದ ಕವನಗಳನ್ನು ಪದ್ಮಾವತಿ ಮರಿಬಸಣ್ಣನವರ, ಸಾವಿತ್ರಿ ಲಮಾಣಿ, ಹರ್ಷಾ ಬ್ಯಾಹಟ್ಟಿ, ಶಿಲ್ಪಾ ಕುರಹಟ್ಟಿ, ಬಾಹುಬಲಿ ಜೈನರ್, ಮೃತ್ಯುಂಜಯ ಹಿರೇಮಠ, ರಾಜಶ್ರೀ ಕುಲಕರ್ಣಿ, ನೂರಜಾನ ಜಾತಿಗೇರ, ಶ್ವೇತಾ ಅಳವಂಡಿ ತಮ್ಮ ವಿಶಿಷ್ಟ ಗಾಯನ ಶೈಲಿಯಲ್ಲಿ ಪ್ರಸ್ತುತಪಡಿಸಿದರು. ಅಲ್ಲದೇ ಚಿತ್ರಕಲಾವಿದರಾದ ಬಿ.ಜಿ. ನೆಲಜೇರಿ, ರಾಜು ಬೇಡಗೌಡರ, ಸರೋಜಾ ಮುಂಡೇವಾಡಿ, ವಿ.ಡಿ. ಹುಲಬಜಾರ, ನಜೀರ ಡಂಬಳ, ಪ್ರಿಯಾ ಅಂಗಡಿ, ರಮೇಶ ಗಾರವಾಡ, ಶಿವರಾಜ ಕಮ್ಮಾರ, ರಾಜು ಎಚ್.ಬಿ. ಕುಂಚದಿಂದ ಚಿತ್ರವನ್ನು ಬಿಡಿಸುವ ಮೂಲಕ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದವು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾರ್ವತಿ ಮಾಳೆಕೊಪ್ಪಮಠ ಅವರಿಂದ ಕನ್ನಡ ಘಜಲ್, ಹರ್ಲಾಪುರದ ಸಾಂಬಯ್ಯ ಹಿರೇಮಠ ಅವರಿಂದ ಜಾನಪದ ಗೀತೆ, ಬೆಂಗಳೂರಿನ ಶಂಕರ ಶ್ಯಾನಭಾಗ ಮತ್ತು ತಂಡದವರಿಂದ ರಾಷ್ಟ್ರಕವಿ ದಿ. ಜಿ.ಎಸ್.ಎಸ್. ಕಾವ್ಯನಮನ, ಗದಗನ ಅನಿಲ ವೈದ್ಯ, ಕೊತಬಾಳದ ಬಸವರಾಜ ಪಾಗದ, ನರೇಗಲ್ಲನ ಅರುಣ ಕುಲಕರ್ಣಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ, ಮಂಗಳೂರಿನ ಹೆಜ್ಜೆನಾದ ತಂಡದವರಿಂದ ನಾದನೃತ್ಯ, ಗದಗನ ಎಎಸ್ಎಸ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಗುರ್ಜಿ ನೃತ್ಯ, ಗದಗನ ರಾಜೇಶ್ವರಿ ಕಲಾ ಕುಟೀರದವರಿಂದ ಭರತನಾಟ್ಯ, ಧಾರವಾಡದ ಸುಜಾತಾ ಗುರವ ಅವರಿಂದ ಸುಗಮ ಸಂಗೀತ, ಗದಗನ ವಿಜಯ ನಾಟ್ಯಸಂಘದವರಿಂದ ಕಥಕ ನೃತ್ಯ, ಆರ್.ಎನ್.ಕೆ. ಮಿತ್ರ ಮಂಡಳಿ ಹಾಗೂ ಭಾಗ್ಯವಂತಿ ನಾಟ್ಯ ಸಂಘದವರಿಂದ ನಾಟಕ ಪ್ರದರ್ಶನ ಜರುಗಿತು. ಸುಮಾರು ಮಂಗಳವಾರ ಬೆಳಗ್ಗೆ 5ರ ವರೆಗೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಸಾವಿರಾರು ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದರು.