ಸೌಲಭ್ಯಕ್ಕಾಗಿ ಪುರವಾಸಿಗಳ ಧರಣಿ
ರೋಣ: ಹದಗೆಟ್ಟ ರಸ್ತೆ, ಗಬ್ಬೆದ್ದು ನಾರುತ್ತಿರುವ ಚರಂಡಿ, ಕುಡಿವ ನೀರಿನ ಕೊರತೆ, ಮಹಿಳಾ ಶೌಚಾಲಯ ಸೇರಿದಂತೆ ಅನೇಕ ಮೂಲ ಸೌಕರ್ಯ ಒದಗಿಸುವಲ್ಲಿ ರೋಣ ಪುರಸಭೆ ಮತ್ತು ವಾರ್ಡ್ ಸದಸ್ಯರು ನಿರ್ಲಕ್ಷ್ಯ ತಾಳಿದ್ದು, ಇದರಿಂದ ನಿತ್ಯ ನೂರಾರು ತೊಂದರೆ ಅನುಭವಿಸುವಂತಾಗಿದೆ ಎಂದು ಪಟ್ಟಣದ ಪುರಸಭೆ ವ್ಯಾಪ್ತಿಯ 22ನೇ ವಾರ್ಡಿನ ಕಲ್ಯಾಣ ನಗರದ ನಿವಾಸಿಗಳು ಮಂಗಳವಾರ ಪ್ರತಿಭಟಿಸಿದರು.
ಈ ಕಾಲೋನಿಯು 20 ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಯಾವುದೇ ರಸ್ತೆ, ಗಟಾರುಗಳಿಲ್ಲ. ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಇಲ್ಲಿನ ನಿವಾಸಿಗಳು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಈ ಹಿಂದೆ ಪುರಸಭೆಗೆ ಅನೇಕ ಬಾರಿ ಲಿಖಿತ ಮತ್ತು ಮೌಖಿಕವಾಗಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸರಿಯಾದ ಗಟಾರ ಇಲ್ಲದ್ದರಿಂದ ನೀರು ಹರಿಯದೇ ನಿಂತಿದೆ. ಇದರಿಂದ ಗಬ್ಬುವಾಸನೆ, ಸೊಳ್ಳೆಗಳು ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ ಎಂದು ಪ್ರತಿಭಟನಾ ನಿರತ ಮಾಬುಬಿ ಸೈಯದ, ರಾಜೇಸಾಬ್ ಕಾತರಕಿ, ಮೂಬೂಬಿ ಕಾತರಕಿ ಹೇಳಿದರು.
ಸದಸ್ಯರಿಂದ ಸಂಪೂರ್ಣ ನಿರ್ಲಕ್ಷ್ಯ: ವಾರ್ಡ್ನ ಜನತೆ ನಿತ್ಯ ನೂರಾರು ಸಮಸ್ಯೆಗಳನ್ನು ಎದುರಿಸುತ್ತಾ ಭಯದಲ್ಲಿ ಜೀವನ ನಡೆಸುತ್ತಿದ್ದರೂ ಸದಸ್ಯರು ಸಮಸ್ಯೆ, ಜನತೆ ಎದುರಿಸುತ್ತಿರುವ ತೊಂದರೆಗೆ ಸ್ಪಂದಿಸುವಲ್ಲಿ ಇತ್ತ ಸುಳಿದಿಲ್ಲ. ಹೀಗಾದರೆ ನಮ್ಮ ಸಮಸ್ಯೆಯಾರ ಹತ್ತಿರ ಹೇಳಿಕೊಳ್ಳಬೇಕೆಂದು ಹುಸೇನಸಾಬ್ ಕೋಲ್ಕಾರ, ಬೀಬಿಜಾನ ಸೈಯದ, ಜೀವನಬಿ ಕೋಲ್ಕಾರ, ಮಕ್ತುಂಸಾಬ್ ಸೈಯದ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯಲ್ಲಿ ವಾಸ್ತವ್ಯದ ಎಚ್ಚರಿಕೆ: ಇಲ್ಲಿನ ಕಲ್ಯಾಣ ನಗರದ ಜನತೆ ನಿತ್ಯ ನೂರಾರು ಸಮಸ್ಯೆ ಎದುರಿಸುತ್ತಿದ್ದು, ಈ ಹಿಂದ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ವರ್ಗದ ಗಮನಕ್ಕೆ ತರಲಾಗಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಇನ್ನು ಮುಂದೆ ಇಲ್ಲಿನ ಸಮಸ್ಯೆಗಳನ್ನು ನಮಗೆ ಎದುರಿಸಲಾಗುತ್ತಿಲ್ಲ. ಕೂಡಲೇ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಪುರಸಭೆ ಸದಸ್ಯ ಶಫೀಕ ಮೂಗನೂರ ಮತ್ತು ಪುರಸಭೆ ಆಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇಲ್ಲಿನ ಎಲ್ಲಾ ನಿವಾಸಿಗಳು ಮನೆ ತೊರೆದು ಪುರಸಭೆಯಲ್ಲಿ ಬಂದು ವಾಸ್ತವ್ಯ ಹೂಡಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.
22ನೇ ವಾರ್ಡ್ ನಿವಾಸಿಗಳಾದ ಮಾಬವ್ವ ನದಾಫ್, ರಷೀದಬಿ ನದಾಫ್, ಲಕ್ಷ್ಮವ್ವ ಭಜಂತ್ರಿ, ಬಸವ್ವ ಭಜಂತ್ರಿ, ಫಕ್ರುಸಾಬ್ ರೋಣದ, ಬಸಪ್ಪ ಕುರಿ, ಕಲಂದರ ಸೈಯದ, ಶಂಸಾದಬಿ ನದಾಫ್, ಮಕ್ತುಂಸಾಬ್ ಸೈಯದ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.