ಇಂದಿನಿಂದ ಮುಕ್ತಿಮಂದಿರದಲ್ಲಿ ಮಹಾರಥೋತ್ಸವ
ಲಕ್ಷ್ಮೇಶ್ವರ: ಜ. ಪಂಚಾಚಾರ್ಯರ ಧ್ವಜಾರೋಹಣ ಹಾಗೂ ರಂಭಾಪುರಿ ಜ. ವೀರಗಂಗಾಧರ ಶ್ರೀಗಳ ಗದ್ದುಗೆಗೆ ಫೆ. 27ರಂದು ಪ್ರಾತಃಕಾಲ ಮಹಾರುದ್ರಾಭಿಷೇಕ, ನಂತರ 9 ಶಿವದೀಕ್ಷೆ ಅಯ್ಯಾಚಾರ ನಡೆಯುವುದು.
ಸಂಜೆ 5ಕ್ಕೆ ಜ. ಪಂಡಿತಾರಾಧ್ಯರ ಹಾಗೂ ಜ. ವಿಶ್ವಾರಾಧ್ಯರ ಜಯಂತಿ ನಿಮಿತ್ತ ರಥೋತ್ಸವ ಜರುಗುವುದು. ಫೆ. 28ರಂದು ಬೆಳಗ್ಗೆ ಸನ್ನಿಧಿಯವರ ಗದ್ದುಗೆಗೆ ಶಿವಪೂಜೆ ಸಂಜೆ 5ಕ್ಕೆ ಶಿವಪಾರ್ವತಿ ರಥೋತ್ಸವ ನಂತರ ಧರ್ಮಸಭೆ ನಡೆಯುವುದು. ಮಾ. 1ರಂದು ಶಿವರಾತ್ರಿ ಅಮಾವಾಸ್ಯೆ ವ್ರತಾಚರಣೆ ನಿಮಿತ್ತ ಬೆಳಗ್ಗೆ 5ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಸುಲ್ತಾನಪುರದ ಭಕ್ತರಿಂದ ವಿಶ್ವಶಕ್ತಿಯ ಭಾವಚಿತ್ರದ ಮೆರವಣಿಗೆಯು ಗ್ರಾಮದಿಂದ ಹೊರಟು ಶ್ರೀಕ್ಷೇತ್ರ ತಲುಪುವುದು, ನಂತರ ಶಿವಪಾರ್ವತಿ, ಮಹಾಗಣಪತಿ, ವೀರಭದ್ರಸ್ವಾಮಿಯವರ ರಥೋತ್ಸವ ನಡೆಯುವುದು. ಮಧ್ಯಾಹ್ನ ಜ. ವೀರಗಂಗಾಧರ ಶ್ರೀಗಳ ಮೂರ್ತಿಯ ಅಡ್ಡಪಲ್ಲಕ್ಕಿ ನಂತರ ಕಡುಬಿನ ಕಾಳಗ, ಅನ್ನದ ಹೊಳೆ-ಹೊನ್ನಿನ ಮಳೆ ಜರುಗುವುದು. ಸಂಜೆ 4.3ಕ್ಕೆ ಶ್ರೀಕ್ಷೇತ್ರದ ಪಟ್ಟಾಧ್ಯಕ್ಷ ವಿಮಲ ರೇಣುಕ ವಿರಮುಕ್ತಿಮುನಿ ಶಿವಾಚಾರ್ಯರ ನೇತೃತ್ವ ಹಾಗೂ ಕಲಾದಗಿಯ ಚಂದ್ರಶೇಖರ ಶ್ರೀಗಳ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಮಾರಂಭ ಜರುಗುವುದು. ಸಮಾರಂಭದಲ್ಲಿ ಬಂಕಾಪುರ, ಗಿರಿಸಾಗರ, ಅಬ್ಬಿಗೇರಿ, ಎಮ್ಮಿಗನೂರ, ಸುಳ್ಳ, ಕುಂದಗೋಳ, ಬಿಲ್ಕೆರೂರ ಹಾಗೂ ಲಕ್ಷ್ಮೇಶ್ವರ ಸೇರಿದಂತೆ ಅನೇಕ ಶ್ರೀಗಳು ಉಪಸ್ಥಿತರಿರುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.