ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲೆಗೆ ಅಕಾಲಿಕ ಮಳೆ: ರೈತರಲ್ಲಿ ಆತಂಕ

Lingaraj Badiger
Updated On : 27 Feb 2014, 11:13 am

ಗದಗ: ಬೇಸಿಗೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಬುಧವಾರ ಸಂಜೆ ಗದಗ, ಬೆಟಗೇರಿ ಅವಳಿ ನಗರದಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾಯಿತು.
ಶಿವರಾತ್ರಿ ಮುನ್ನಾದಿನವೇ ಮಳೆರಾಯನ ದರ್ಶನವಾಗಿರುವುದು ಒಂದೆಡೆ ಉತ್ಸಾಹಕ್ಕೆ ಕಾರಣವಾಗಿದ್ದರೆ. ಜೋಳ, ಹತ್ತಿ, ಗೋದಿ ರಾಶಿ ಮಾಡುವ ಹಂತದಲ್ಲಿದ್ದು, ಜಿಲ್ಲೆಯ ರೈತ ಸಮುದಾಯ ಮಾತ್ರ ಇದೇಕೆ ಮಳೆ ಬಂತು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಬುಧವಾರ ರಾತ್ರಿಯೂ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಗದಗ ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ನರಗುಂದ ಹಾಗೂ ತಾಲೂಕಿನ ಕೆಲ ಗ್ರಾಮಗಳಲ್ಲಿ ಬಹುತೇಕ ಪಟ್ಟಣಗಳಲ್ಲಿ ಬುಧವಾರ ಸಂಜೆ 20 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾದ ಬಗ್ಗೆ ವರದಿಯಾಗಿದೆ. ಈ ಅಕಾಲಿಕ ಮಳೆ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ.
ರೋಣ ವರದಿ: ತಾಲೂಕಿನ ಹಲವಡೆ ಬುಧವಾರ ಸಾಯಂಕಾಲ ಅರ್ಧ ಗಂಟೆಗೂ ಸಾಧಾರಣ ಮಳೆಯಾಗಿದ್ದು, ಇದರಿಂದ ರೈತರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಸಾಯಂಕಾಲ ಜೋರಾದ ಗಾಳಿ ಬಿಸಿದ್ದು, ಸುಮಾರು ಅರ್ಧ ಗಂಟೆ ರೋಣ ಪಟ್ಟಣ ಸೇರಿದಂತೆ ತಾಲೂಕಿನ ಬೆಳವಣಕಿ, ಯಾವಗಲ್, ಕೌಜಗೇರಿ, ಯಾ.ಸ. ಹಡಗಲಿ, ಮಾಳವಾಡ, ಹೊನ್ನಾಪುರ, ಡ.ಸ.ಹಡಗಲಿ, ಮೇಲ್ಮಠ, ಅಸೂಟಿ, ಕುರಹಟ್ಟಿ, ಮುದೇನಗುಡಿ, ಬಾಸಲಾಪುರ, ಚಿಕ್ಕಮಣ್ಣೂರ, ಮಲ್ಲಾಪುರ, ಸವಡಿ, ಜಿಗಳೂರ, ಹೊಸಹಳ್ಳಿ, ಮುಗಳಿ, ಇಟಗಿ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆಯಾಗಿದೆ. ಕೆಲ ರೈತರು ಹೊಲದಲ್ಲಿ, ಮನೆಯಲ್ಲಿ ಇದ್ದರಿಂದ ಕಟಾವು ಮಾಡಿದ ಬೆಳೆ ರಕ್ಷಿಸುವಲ್ಲಿ ಹರ ಸಾಹಸಪಟ್ಟರು.
ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ತಾಲೂಕಿನ ರೈತರಲ್ಲಿ ಆತಂಕ ಮೂಡಿದೆ. ಈಗಾಗಲೇ ರೈತರು ಬೆಳೆದ ಬೆಳೆಯ ಕಟಾವು, ರಾಶಿ ಮಾಡುವ ಸಂದರ್ಭವಿದು. ಹೊಲದಲ್ಲಿ ರೈತರು ಬಿಳಿಜೋಳ, ಗೋದಿಯನ್ನು ರಾಶಿಗೆಂದು ಕಟಾವು ಮಾಡಿ ಸಂಗ್ರಹಿಸಿದ್ದಾರೆ. ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯೂ ಕಟಾವು (ಬಿಡಿಸುವ) ಹಂತಕ್ಕೆ ಬಂದಿದೆ. ಹತ್ತಿಯೂ ನೆಲಕ್ಕೆ ಬಿಳುವ ಸಾಧ್ಯತೆ ಹೆಚ್ಚು. ರಾಶಿ ಮಾಡಿಲಾದ ಶೇಂಗಾ ಹೊಟ್ಟನ್ನು ಹೊಲ(ಕಣದಲ್ಲಿ)ದಲ್ಲಿದೆ. ಮಳೆಯಾಗಿದ್ದರಿಂದ ರೈತರು ದವಸ, ಧಾನ್ಯಗಳನ್ನು ರಕ್ಷಿಸುವಲ್ಲಿ ರೈತರು ತೀವ್ರ ತೊಂದರೆಯನ್ನು ಎದುರಿಸುವಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement