ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಟೆಂಡರ್ ರದ್ದುಪಡಿಸುವ ನಿರ್ಣಯ: ಪ್ರತಿಭಟನೆ

Lingaraj Badiger
Updated On : 27 Feb 2014, 11:07 am

ಗಜೇಂದ್ರಗಡ: ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಬುಧವಾರ ತುರ್ತು ಸಭೆ ನಡೆಸಿದ ಆಡಳಿತ ಸದಸ್ಯರು ಟೆಂಡರ್ ಪ್ರಕ್ರಿಯೆ ರದ್ದುಪಡಿಸುವ ಕುರಿತು ಏಕಾಏಕಿ ಕೈಗೊಂಡ ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡಿದ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಪುರಸಭೆ ಅಧ್ಯಕ್ಷೆ ಕವಿತಾ ನಾಗರಾಜ ಜಾಲಿಹಾಳ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಮಾಧ್ಯಮದವರನ್ನು ಹೊರಗಿಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಸಿಪಿಐಎಂ ಸದಸ್ಯ ಎಂ.ಎಸ್. ಹಡಪದ, ಟೆಂಡರ್ ರದ್ದುಪಡಿಸುವ ಹಿಂದೆ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಪುರಸಭೆ ಆಡಳಿತ ಸಿದ್ಧಪಡಿಸಿದ ಯೋಜನೆಯಂತೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿರುವ ಅಭಿವೃದ್ಧಿ ಯೋಜನೆಯನ್ವಯ ಎಲ್ಲ ಪತ್ರಿಕೆಯಲ್ಲಿ ಟೆಂಡರ್ ಕರೆಯಲಾಗಿತ್ತು. ಇದನ್ನು ರದ್ದುಪಡಿಸಿ ಪ್ಯಾಕೇಜ್ ರೂಪದಲ್ಲಿ ತರುವ ಉದ್ದೇಶದಿಂದ ಇದರ ವಿರುದ್ಧ ಆಡಳಿತ ಪಕ್ಷ ಏಕಮಯ ನಿರ್ಣಯ ಕೈಗೊಂಡಿರುವುದನ್ನು ಗಮನಿಸಿದರೆ ಪುರಸಭೆ ಆಡಳಿತಕ್ಕೆ ಪಟ್ಟಣದ ಅಭಿವೃದ್ಧಿ ಬೇಕಾಗಿಲ್ಲ ಎಂದು ದೂರಿದರು.
ಪಟ್ಟಣದಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡಿದ ಹಣವನ್ನು ಸ್ಥಳೀಯ ಆಡಳಿತದ ನಿರ್ಲಕ್ಷ್ಯತನದಿಂದ ಕೋಟ್ಯಂತರ ಹಣ ಪೋಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಶಿವರಾಜ ಘೋರ್ಪಡೆ ದೂರಿದರು. ಬುಧವಾರ ನಡೆದ ಸಾಮನ್ಯ ಸಭೆಯಲ್ಲಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಭೆಗೆ ಮಾಧ್ಯಮದವರಿಗೆ ಆಹ್ವಾನ ನೀಡದೆ. ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಎಸಗಿದ ಘೋರ ಅಪಚಾರ ಎಂದು ಆರೋಪಿಸಿ ಸಭೆಯಿಂದ ಹೊರ ನಡೆದು ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಮಾತನಾಡಿ, ಅಧ್ಯಕ್ಷರು ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳ ಅನುಮೋದನೆ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದರು. ಆದರೆ, ಕನಿಷ್ಠ ಸೌಜನ್ಯಕ್ಕಾದರೂ ವಿರೋಧ ಪಕ್ಷದ ಸದಸ್ಯರ ಗಮನಕ್ಕೆ ತರಬೇಕೆನ್ನುವ ವಿವೇಚನೆಯಿಲ್ಲದೆ ತರಾತುರಿಯಲ್ಲಿ ಹಲವಾರು ಕಾಮಗಾರಿಗಳ ಟೆಂಡರ್ ಪ್ರಕಟಣೆಯನ್ನು ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದರು. ಬಳಿಕ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದು ಮೂರ್ಖತನದ ಪರಮಾವಧಿಯಾಗಿದೆ. ತಾವೇ ಕರೆದ ಟೆಂಡರನ್ನು ರದ್ದುಪಡಿಸಿ ಪುನಃ ಟೆಂಡರ್ ಕರೆಯಲು ಮುಂದಾಗಿರುವುದು ಆಡಳಿತದ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿವೆ. ಅಗತ್ಯಕ್ಕಿಂತ ಹೆಚ್ಚಿನ ಬಹುಮತ ಇದೆ ಎನ್ನುವ ಅಹಂನಿಂದ ಆಡಳಿತ ಪಕ್ಷದವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಿಯಮಾವಳಿಯಂತೆ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಸರ್ವ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಇರಾದೆ ಮರೆತು ತಮಗೆ ಇಷ್ಟಬಂದಾಗ ಸಭೆ ಕರೆಯುತ್ತಿರುವುದು ಹಲವು ಗುಮಾನಿಗಳಿಗೆ ಎಡೆಮಾಡಿದೆ. ಈಚೆಗೆ ಕರೆದ ಟೆಂಡರ್ ಪ್ರಕಟಣೆಯಲ್ಲಿ ಎಲ್ಲ ದರ್ಜೆಯ ಗುತ್ತಿಗೆದಾರರಿಗೆ ಸಮಾನಾಂತರವಾಗಿ ಅರ್ಜಿ ಆಹ್ವಾನಿಸುವ ಬದಲು ಕೇವಲ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಸೀಮಿತವಾಗುವಂತೆ ಟೆಂಡರ್ ಪ್ರಕಟಣೆ ಹೊರಡಿಸಿರುವುದರ ಉದ್ದೇಶವಾದರೂ ಏನು ಎಂದರು. ಪಟ್ಟಣದ ಪ್ರತಿ ಬಡಾವಣೆಯಲ್ಲಿ 2-3 ತಿಂಗಳಿಂದ ಸ್ವಚ್ಛತೆಯ ಬಗ್ಗೆ ಸ್ಥಳೀಯ ಆಡಳಿತ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಪುರಸಭೆಯ 23 ವಾರ್ಡ್‌ಗಳಲ್ಲಿ ಬಹುತೇಕ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇದ್ಯಾವುದು ನಮಗೆ ಸಂಬಂಧವಿಲ್ಲ ಎಂಬಂತೆ ಆಡಳಿತ ಪಕ್ಷದವರು ವರ್ತಿಸುತ್ತಿದ್ದಾರೆ. ಇದರಿಂದ ಜನರಲ್ಲಿ ಬೇಸರ ಮೂಡಿಸಿದೆ ಎಂದು ದೂರಿದರು. ಮಕ್ತುಂಭಿ ಹಣಗಿ, ಸುಜಾತಾ ಚುಂಚಾ, ಶಾರದಾ ರಾಠೋಡ, ಶಾರವ್ವ ತಳವಾರ, ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement