ನೀರಾವರಿ ಕೊರತೆ ಜಿಲ್ಲೆ ಅಭಿವೃದ್ಧಿಗೆ ಹಿನ್ನಡೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 26
ನೀರಾವರಿ ಹಾಗೂ ಕುಡಿವ ನೀರಿನ ಕೊರತೆಯಿಂದಾಗಿ ಗದಗ ಜಿಲ್ಲೆಗೆ ಅಭಿವೃದ್ಧಿ ದೃಷ್ಟಿಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಪತ್ರಕರ್ತ ಶಿವಕುಮಾರ ಕುಷ್ಟಗಿ ಹೇಳಿದರು.
ಅವರು ಬುಧವಾರ ಗದಗ ನಗರದ ಅಕ್ಕನ ಬಳಗದಲ್ಲಿ ಜಿಲ್ಲಾ ಡಿವೈಎಫ್‌ಐ ಸಂಘಟನೆಯ ವತಿಯಿಂದ ಗದಗ ಜಿಲ್ಲೆಯ ನೀರಾವರಿ ಯೋಜನೆಗಳು ಹಾಗೂ ಕುಡಿವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಗದಗ ಭೌಗೋಳಿಕವಾಗಿ ಸಣ್ಣ ಜಿಲ್ಲೆಯಾಗಿದ್ದರೂ ಇಲ್ಲಿನ ಸಮಸ್ಯೆಗಳು ಮಾತ್ರ ದೊಡ್ಡದಾಗಿವೆ. ಜಿಲ್ಲೆಯ ಎರಡೂ ಬದಿಗಳಲ್ಲಿ ಎರಡು ನದಿಗಳು ಹರಿಯುತ್ತಿದ್ದರು ಜಿಲ್ಲೆಯ ಜನತೆ ಮಳೆಗಾಲದಲ್ಲಿಯೇ ಕುಡಿವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಾದ ಸಿಂಗಟಾಲೂರು ಹಾಗೂ ಕಳಸಾ-ಬಂಡೂರಿ ವಿಷಯದಲ್ಲಿ ಸರ್ಕಾರಗಳು ಇನ್ನಷ್ಟು ಗಮನವನ್ನು ನೀಡಿ, ಜಿಲ್ಲೆಯ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಜಿಲ್ಲೆಯ ಆರ್ಥಿಕ ಬೆನ್ನೆಲುಬು ಎಂದರೆ ಅದು ಕೃಷಿ, ಇನ್ನು ಜಿಲ್ಲೆಯ ಎಲ್ಲಾ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳು ಕುಡಿವ ನೀರಿಗಾಗಿ ಆಶ್ರಯಿಸಿರುವುದು ಕೊಳವೆಬಾವಿಗಳನ್ನು. ಹೀಗಾಗಿ ಜಿಲ್ಲೆಯ ಜನತೆ ಹನಿ ನೀರು ಕುಡಿಯಬೇಕಾದರೂ ಹೆಸ್ಕಾಂ ಇಲಾಖೆಯ ಅಪ್ಪಣೆ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯಿಂದ 10 ಪ್ರಮುಖ ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದರೂ ಅವುಗಳಿಗೆ ಸಮರ್ಪಕ ಮಳೆಯಾಗದ ಹಾಗೂ ಕೆರೆಗಳಿಗೆ ಹರಿದು ಬರುವ ನೀರಿನ ಮೂಲಗಳೆಲ್ಲಾ ಒತ್ತುವರಿಯ ನೆಪದಲ್ಲಿ ಬಂದ್ ಆಗಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿವೆ ಎಂದರು. ಸರ್ಕಾರ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಅಲ್ಲಲ್ಲಿ ನೀರು ಶುದ್ಧೀಕರಣ ಘಟಕ ಪ್ರಾರಂಭಿಸಿವೆ. ಇದು ಸ್ವಾಗತಾರ್ಹವೆ. ಆದರೆ, ಇವುಗಳ ನಿರ್ವಹಣೆ ಮತ್ತು ನೀರಿನಲ್ಲಿನ ಲವಣಾಂಶಗಳನ್ನು ಕಡಿಮೆ ಮಾಡುವ, ಕಡಿಮೆ ಇರುವ ಖನಿಜಗಳನ್ನು ಸೇರಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಕೇವಲ ಪರ್ಯಾಯ ವ್ಯವಸ್ಥೆಯಾಗಿದೆ. ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಗಮನ ನೀಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಬಸವರಾಜ ಪೂಜಾರ ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ ಎಂದರು. ಕಾರ್ಮಿಕ ಮುಖಂಡ ಮಾರುತಿ ಚಿಟಗಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಹಾಜರಿದ್ದರು. ಇದೇ ವೇಳೆ ನೀರಾವರಿ ಹಾಗೂ ಕುಡಿವ ನೀರಿನ ಕುರಿತು ಸಂವಾದ ಕಾರ್ಯಕ್ರಮ ಜರುಗಿತು. ಪೀರು ರಾಠೋಡ ವಂದಿಸಿದರು. ಮಾಗುಂಡಪ್ಪ ಅಂಗಡಿ ನಿರೂಪಿಸಿದರು.