ರೋಣ: ಸಿಡಿಲು ಬಡಿದು 11 ಜನರಿಗೆ ಗಾಯ
ರೋಣ: ಸಿಡಿಲು ಬಡಿದು 11 ಜನರಿಗೆ ಗಾಯವಾಗಿದ್ದು, ಇದರಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮದ ತಾಯಮ್ಮನ ಹಳ್ಳದ ಹತ್ತಿರದ ಬುಧವಾರ ಸಂಜೆ ನಡೆದಿದೆ.
ಗಾಯಗೊಂಡವರು ಮಲ್ಲಾಪುರ ಗ್ರಾಮದವರಾಗಿದ್ದು, ಬಸಪ್ಪ ಅರಹುಣಸಿ ಎಂಬವರ ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದು, ದಿಢೀರ್ ಗುಡುಗು, ಮಿಂಚು ಸಹಿತ ಮಳೆಯಾಗಿದ್ದರಿಂದ ಹೊಲದಲ್ಲಿದ್ದ ಟ್ರ್ಯಾಕ್ಟರ್ ಟ್ರೈಲರ್ ಬುಡದಲ್ಲಿ ಕುಳಿತಿದ್ದರು ಎನ್ನಲಾಗಿದೆ. ರಭಸವಾಗಿ ಬಂದ ಸಿಡಿಲು ಇವರಿಗೆ ಅಪ್ಪಳಿಸಿದ್ದರಿಂದ ಎಲ್ಲರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು 108 ಆರೋಗ್ಯ ರಕ್ಷಾ ಮೂಲಕ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆ ದಾಖಲಿಸಲಾಯಿತು. ಯಾವುದೇ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆ ವೈದ್ಯರಾದ ಡಾ. ಪೊಲೀಸ್ ಪಾಟೀಲ ತಿಳಿಸಿದರು. ಗಾಯಗೊಂಡವರನ್ನು ಮಲ್ಲಾಪುರ ಗ್ರಾಮದ ಅನ್ನಪೂರ್ಣಾ ಪಡೆಗನ್ನವರ, ಚೈತ್ರಾ ಅರಹುಣಸಿ, ಶಾಂತವ್ವ ನೇಲಗುಡ್ಡದ, ಹೇಮವ್ವ ಗುಗ್ಗನ್ನವರ, ಯಮನವ್ವ ನದಾಫ್, ಉಮಾ ಪಡಸೂಗಿ, ಮಲ್ಲವ್ವ ಬೆಟಗೇರಿ, ಕುಮಾರ ಅರಹುಣಸಿ, ಮಲ್ಲವ್ವ ಕರಲೆಕ್ಕನವರ, ಪಾರವ್ವ ಕೆರಿ ಮತ್ತು ರೇಣವ್ವ ಹಳ್ಳಿ ಎಂದು ಗುರುತಿಸಲಾಗಿದೆ. ಅನ್ನಪೂರ್ಣಾ ಪಡೆಗನ್ನವರ, ಚೈತ್ರಾ ಅರಹುಣಸಿ, ಶಾಂತವ್ವ ನೇಲಗುಡ್ಡದ ಅವರಿಗೆ ಗಂಭೀರ ಗಾಯಗಳಾಗಿವೆ.
ತಹಸೀಲ್ದಾರ್ ಭೇಟಿ: ಸುದ್ದಿ ತಿಳಿದ ತಕ್ಷಣವೇ ತಹಸೀಲ್ದಾರ್ ಎ.ಜಿ. ಪಂಡೀತ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇವು ವಿಚಾರಿಸಿದರು. ಯಾವುದೇ ರೀತಿಯ ಪ್ರಾಣಾಪಯಗಳಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯಬಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಗದಗ ಅಥವಾ ಹುಬ್ಬಳ್ಳಿ ಕಿಮ್ಸಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.