ವಿಠ್ಠಲಾಪುರದಲ್ಲಿ ಅಪರೂಪದ ರಸಲಿಂಗು
ಮುಂಡರಗಿ: ಮಹಾಶಿವರಾತ್ರಿ ಈಶ್ವರೋಪಾಸನೆಗೆ ಪ್ರಮುಖವಾದ ವ್ರತವಾಗಿದೆ. ಅಮಾವಾಸ್ಯೆ ಹಿಂದಿನ ದಿನದ ಚತುರ್ದಶಿಯನ್ನು ಮಾಸ ಶಿವರಾತ್ರಿ ಎಂತಲೂ, ಮಾಘವಧ್ಯ ಚತುರ್ದಶಿಯನ್ನು ಮಹಾಶಿವರಾತ್ರಿ ಎಂದು ಕರೆಯುತ್ತಿದ್ದು, ಮಹಾಶಿವರಾತ್ರಿ ರಾಜ್ಯದೆಲ್ಲೆಡೆ ಅನೇಕರು ಶಿವನನ್ನು ಭಕ್ತಿಯಿಂದ ಪೂಜಿಸುವುದುಂಟು. ದಕ್ಷಿಣಕಾಶಿ ಎಂದು ಗುರುತಿಸುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದಿರಹಳ್ಳಿ ಗ್ರಾಮ ಪುರಾಣ ಪ್ರಸಿದ್ಧ ಕ್ಷೇತ್ರವಾಗಿದೆ. ಅಲ್ಲಿಂದ ಒಂದು ಕಿಮೀ ಅಂತರದಲ್ಲಿರುವುದು ವಿಠ್ಠಲಾಪುರ ಗ್ರಾಮ. ಪಂಪಾಕ್ಷೇತ್ರವನ್ನು ಪಾವನಗೊಳಿಸಿದ ಶ್ರೀಮದಾದ್ಯ ಬಿಷ್ಟಪ್ಪಯ್ಯನವರು ವಾಸ ಮಾಡಿದ ತಮ್ಮ ತಪ, ಜ್ಞಾನ ಹಾಗೂ ಅನುಷ್ಠಾನಗಳಿಂದ ಪಾವನಗೊಳಿಸಿದ ಪುಣ್ಯಸ್ಥಾನ.
ಈ ವಿಠ್ಠಲಾಪುರ ಗ್ರಾಮದಲ್ಲಿ 25 ರಿಂದ 30 ಕೆಜಿ ತೂಕದ ರಸಲಿಂಗು ಇದೆ. ಇಷ್ಟು ಭಾರವಾದ ರಸಲಿಂಗು ಭಾರದಲ್ಲಿ ಇನ್ನೆಲ್ಲಿಯೂ ಇಲ್ಲ ಎನ್ನಲಾಗುತ್ತಿದೆ. ಇದಕ್ಕೆ ಇಲ್ಲಿ ನಿತ್ಯ ಅಭಿಷೇಕ ನಡೆಯುತ್ತಿದ್ದು, ವಿಠ್ಠಲಾಪುರ ಮಹಾಪುರುಷ ಮನೆತನದವರು ಇದನ್ನು ಪೂಜಿಸುತ್ತಿದ್ದು, ಈ ರಸಲಿಂಗುವನ್ನು ರಸಶಾಸ್ತ್ರಜ್ಞಾನದ ತಳಹದಿಯ ಮೇಲೆ ಸಾಕಾರಗೊಳಿಸಲಾಗಿದೆ ಎಂದು ಪ್ರತೀತಿ. ಇದರ ದರ್ಶನಕ್ಕಾಗಿ ಭಕ್ತರು ಸಾವಿರಾರು ವರ್ಷಗಳಿಂದ ಶಿವರಾತ್ರಿ ಆಚರಣೆಗಾಗಿ ಇಲ್ಲಿಗೆ ತಪ್ಪದೇ ಬರುತ್ತಾರೆ.
ರಸಾರ್ಣವ, ಸುಧಾಕರ, ವೀರಮಹೇಶ್ವರಾಗಮ ಮುಂತಾದ ಗ್ರಂಥಗಳಲ್ಲಿ ರಸಲಿಂಗಗಳ ಬಗ್ಗೆ ವಿವರಗಳಿರುವುದಾಗಿ ಕೇಳಿಬರುತ್ತಿದೆ. ಆರು ಇಂಚಿನಷ್ಟು ವಿಸ್ತಾರವಾದ ತಳ, ಒಂದು ಅಡಿ, ಎತ್ತರವಿರುವ ಅದರ ಹೊರಭಾಗ, ಪಂಚಲೋಹದಿಂದ ತಯಾರಾಗಿದ್ದು, ಒಳಭಾಗದಲ್ಲಿ ಸಂಪೂರ್ಣವಾಗಿ ಪಾದರಸದಿಂದ ತುಂಬಿದೆ. ಈ ರಸಲಿಂಗುವಿನಲ್ಲಿರುವ ಪಾದರಸ ಹವಾಮಾನದಲ್ಲಿ ಉಷ್ಣತೆ ಹೆಚ್ಚಿದಾಗ ಪಾದರಸ ಹೊರದೂಡಲ್ಪಡುತ್ತದೆ. ಪ್ರತಿ 40 ರಿಂದ 45 ವರ್ಷಕ್ಕೆ ಅದರಿಂದ ಒಂದೆರಡು ಹನಿ ಪಾದರಸ ಪ್ರಸಾದ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುತ್ತಿದ್ದು, 1965ರಲ್ಲಿ ಅದರಿಂದ ಪಾದರಸ ಬಂದಿತ್ತು. ಮತ್ತೆ 2001ರಲ್ಲಿ ಲಿಂಗುವಿನಿಂದ ಪಾದರಸ ಬಂದಿದೆ. ಅದನ್ನು ಅವರ ಮನೆತನದವರು ಸಂಗ್ರಹಿಸಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ರಸಲಿಂಗವು ದಿನಕ್ಕೆ ಮೂರು ವರ್ಣಕ್ಕೆ ತಿರುಗುತ್ತದೆ. ಮಧ್ಯಾಹ್ನ ಬಂಗಾರದ ವರ್ಣಕ್ಕೆ ತಿರುಗಿ ಭಕ್ತರಿಗೆ ಅತ್ಯಾಕರ್ಷಕವಾಗಿ ಕಾಣುತ್ತದೆ.
- ಶರಣು ಸೊಲಗಿ