ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೈಶಿಷ್ಟ್ಯಪೂರ್ಣ ಅಕ್ಷರ ಜಾತ್ರೆ

Lingaraj Badiger
Updated On : 27 Feb 2014, 11:12 am

- ಪಿ.ಎಸ್. ಪಾಟೀಲ
ರೋಣ: ಪಟ್ಟಣದಲ್ಲಿ ಫೆ.22, 23ರಂದು ಜರುಗಿದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಒಂದೇ ವಿಷಯದ ಮೇಲೆ ನಿಲ್ಲದೆ ಸಾಹಿತ್ಯ, ಸಾಂಸ್ಕೃತಿ, ಕಲೆ, ವಾಸ್ತುಶಿಲ್ಪ, ಸಂಗೀತ, ಸಾಮಾಜಿಕ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಮೇಲೆ ಬೆಳುಕು ಚೆಲ್ಲಿದ ಚಿಂತನಾ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿ ಸಂಪನ್ನಗೊಂಡು ಸಾಹಿತ್ಯಾಸಕ್ತರಿಂದ ಸಮ್ಮೇಳನ ಸೈ ಎನಿಸಿಕೊಂಡಿತು.
ಹೌದು, ವೈವಿಧ್ಯಪೂರ್ಣವಾಗಿ ಕಾರ್ಯಕ್ರಮಗಳನ್ನು ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ದುರ್ಗಸಿಂಹ ಮಹಾಮಂಟಪದ ಮೂಲಕ ಅನಾವರಣಗೊಳಿಸಿದ ಜಿಲ್ಲಾ ಮತ್ತು ತಾಲೂಕು ಕಸಾಪ, ಸಮ್ಮೇಳನದ ಸ್ವಾಗತ ಸಮಿತಿ, 28 ಉಪ ಸಮಿತಿ ಶ್ರಮ ಸಾರ್ಥಕವಾಗಿದೆ. 50 ಸಾವಿರಕ್ಕೂ ಹೆಚ್ಚು ಸಾಹಿತ್ಯ, ಕಲಾಭಿಮಾನಿಗಳು ಪಾಲ್ಗೊಂಡಿದ್ದರು. ರಾಜ್ಯ ಮಟ್ಟದ ಸಮ್ಮೇಳನಕ್ಕಿಂತ ಇದು ಭಿನ್ನವಾಗಿದ್ದಿಲ್ಲ ಎಂಬುದು ಗಮನಾರ್ಹ.
ರಾಜಕೀಯ ಬೆರಸದ ಸಿಎಂ ಭಾಷಣ: ಫೆ. 22ರಂದು ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ, ಭಾಷಣದಲ್ಲಿ  ರಾಜಕೀಯವನ್ನು ಬೆರಸದೇ ನಾಡಿಗೆ ಸಾಹಿತ್ಯಿಕ, ಸಾಂಸ್ಕೃತಿಕ, ಐತಿಹಾಸಿಕ ಕೊಡುಗೆ ನೀಡಿದ ಮಹಿನೀಯರನ್ನು ನೆನೆದರು. ತಾಲೂಕಿನ ಇಟಗಿ ಭೀಮಾಂಭಿಕಾ ದೇವಸ್ಥಾನಕ್ಕೆ ಅನ್ನದಾಸೋಹ ಭವನ ನಿರ್ಮಿಸಲು ರು. 1 ಕೋಟಿ ಘೋಷಣೆ ಮಾಡಿದ್ದು, ಶತಮಾನ ಕಂಡ ಕಸಾಪ ಪ್ರಾಧಿಕಾರಕ್ಕೆ ರು. 5 ಕೋಟಿ ನೀಡುವುದಾಗಿ ಭರವಸೆ ನೀಡಿದ್ದು ವಿಶೇಷ.
ಹರಿದು ಬಂದ ಜನಸಾಗರ: ಫೆ.22ರ ಬೆಳಗ್ಗೆ 11ಕ್ಕೆ ಭುವನೇಶ್ವರಿ ಭಾವಚಿತ್ರ, ಸರ್ವಾಧ್ಯಕ್ಷರಾಗಿದ್ದ ಜನಪದ ತಜ್ಞ ಡಾ. ಸೋಮಶೇಖರ ಇಮ್ರಾಪುರ ಅವರ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಸಿಎಂ ಸಿದ್ದರಾಯಮಯ್ಯ 2 ಗಂಟೆ ತಡವಾಗಿ ಬಂದಿದ್ದು ಹೊರತುಪಡಿಸಿ ಆಯೋಜಕರು ಹಮ್ಮಿಕೊಂಡ ಎಲ್ಲ ಕಾರ್ಯಕ್ರಮ ಪಟ್ಟಿಯಂತೆ ನಡೆದಿವೆ.
ಊಟದ ವ್ಯವಸ್ಥೆ: ಸಮ್ಮೇಳನಕ್ಕಾಗಮಿಸಿ ಸಾಹಿತ್ಯಾಸಕ್ತಿರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ 30 ಊಟದ ಕೌಂಟರ್, 40ಕ್ಕೂ ಹೆಚ್ಚು ಕುಡಿವ ನೀರಿನ ಟ್ಯಾಂಕರ್ ವ್ಯವಸ್ಥೆ, ನೂರಾರು ಕಾರ್ಯಕರ್ತರು ಶ್ರಮಿಸಿದರು. ಸಾಹಿತ್ಯ ಗೋಷ್ಠಿಗಳಂತೂ ಸಮ್ಮೇಳನಕ್ಕೆ ಕಳಸವಿಟ್ಟಂತಿದ್ದವು.
ನಿರ್ಣಯಗಳು: ಸಮ್ಮೇಳನದ ನಿರ್ಣಯಗಳು ಜಿಲ್ಲೆ ಜನತೆಯ ಮೆಚ್ಚುಗೆ ಪಡೆದವು. ಗಜೇಂದ್ರಗಡ, ಲಕ್ಷ್ಮೇಶ್ವರ ತಾಲೂಕನ್ನಾಗಿಸಿ ರು. 10 ಕೋಟಿ ಬಿಡುಗಡೆ, ಕೃಷ್ಣಾ, ಮಲಪ್ರಭೆ ನದಿ ಯೋಜನೆಗೆ ಏತ ನೀರಾವರಿ ಸೃಷ್ಟಿ, ಕೃಷಿ ಕಾಲೇಜ್, ಕೃಷಿ ಉತ್ಪನ್ನ ಸಂಸ್ಕರಣ ಕೇಂದ್ರ ಸ್ಥಾಪನೆ, ಚಾಮರಸ, ಅಂದಾನಪ್ಪ ದೊಡ್ಡಮೇಟಿ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಾಣ, ಇಟಗಿ, ಕೊಡಿಕೊಪ್ಪ, ಸೂಡಿ ಗ್ರಾಮಗಳ ಪ್ರವಾಸಿ ತಾಣ ಮಾಡಲು, ಜಿಲ್ಲೆಯ 4 ತಾಲೂಕಿನಲ್ಲಿ ಕನ್ನಡ ಭವನ ನಿರ್ಮಿಸಲು ಅನುದಾನ ಬಿಡುಗಡೆ, ವಿವಿಧ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ, ಉ.ಕ.ದಲ್ಲಿ ಶಾಸ್ತ್ರೀಯ ವಿಷಯದ ಅಧ್ಯಯನ ಕೇಂದ್ರ ಸ್ಥಾಪನೆ ಸೇರಿದಂತೆ ಅನೇಕ ನಿರ್ಣಯಗಳನ್ನು ಮಂಡಿಸಲಾಗಿದೆ. ಸಮ್ಮೇಳನದಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಕನ್ನಡ ನಾಡು, ನುಡಿ, ನೆಲ-ಜಲ ಕುರಿತು ಮಾಡಿದ ಭಾಷಣ ಜನತೆಯ ಮನದಾಳ ತಲುಪುವಂತಿತ್ತು.
ಸಾಂಸ್ಕೃತಿಕ ಕಾರ್ಯಕ್ರಮ: ಪುಸ್ತಕ ಮಾರಾಟ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಹಿತ್ಯಾಭಿಮಾನಿಗಳಲ್ಲಿ, ಕಲಾ ಆರಾಧಕರಲ್ಲಿ ಉತ್ಸಾಹ ತುಂಬಿದ್ದವು. ಪಂಜಾಬದ ಬಾಂಗ್‌ಡಾ ಡ್ಯಾನ್ಸ್, ಕೊತಬಾಳದ, ಕೊಣ್ಣೂರಿನ ಜೋಗತಿ ನೃತ್ಯ, ಗೋವಾ ತಂಡದ ದೀಪದ ನೃತ್ಯ, ಜ್ಞಾನಸಿಂಧು ಅಂದ ಮಕ್ಕಳ ಯೋಗ ನಾಟ್ಯ, ತಮಿಳುನಾಡು ಕಲಾ ತಂಡದ ಜನಪದ ನೃತ್ಯ, ಗೀಗೀ ಪದ, ಲಾವಣಿ, ಭಜನೆ ಪದ, ದೊಡ್ಡಾಟ, ಸಣ್ಣಾಟ, ಕೋಲಾಟ, ಕಂಸಾಳೆ ನೃತ್ಯ, ಗುರ್ಜಿ ನೃತ್ಯ, ಸುಗ್ಗಿ ಕುಣಿತ ಹೇಗೆ ಅನೇಕ ಕಾರ್ಯಕ್ರಮಗಳು ಜನರನ್ನ ಅಹೋರಾತ್ರಿ ಮೇದಿಕೆಯಲ್ಲಿ ಹಿಡಿದಿಡುವಲ್ಲಿ ಆಕರ್ಷಣೀಯವಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement