ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾದ್ಯಂತ ಶಿವರಾತ್ರಿ ಸಂಭ್ರಮ ಆಚರಣೆ

Lingaraj Badiger
Updated On : 28 Feb 2014, 11:58 am

ಕನ್ನಡಪ್ರಭ ವಾರ್ತೆ, ಗದಗ, ಫೆ. 27
ಮಹಾಶಿವರಾತ್ರಿಯನ್ನು ಜಿಲ್ಲಾದ್ಯಂತ ಗುರುವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಭಕ್ತರು ಬೆಳಗ್ಗೆಯೇ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ, ಅಭಿಷೇಕ ಕೈಗೊಂಡರು. ಭಕ್ತರು ಗುರುವಾರ ದಿನಪೂರ್ತಿ ಉಪವಾಸ ಮಾಡುವ ಮೂಲಕ ರಾತ್ರಿಯಿಡಿ ಶಿವನ ಜಾಗರಣೆ, ಭಜನೆ, ಪೂಜೆಗಳ ಮೂಲಕ ಶಿವರಾತ್ರಿ ಆಚರಿಸಿದರು. ಇನ್ನು ಕೆಲವರು ಬೆಳಗ್ಗೆಯಿಂದಲೇ ನಗರದಲ್ಲಿರುವ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿತು.
ಶಿವರಾತ್ರಿ ಆಚರಣೆ ವಿಧಾನ: ಮಾಘಮಾಸದ ಕೃಷ್ಣಪಕ್ಷ ತ್ರಯೋದಶಿ ದಿನದಿಂದ ಉಪವಾಸ ಅಥವಾ ಚತುರ್ದಶಿಯ ದಿನದಂದಲಾದರೂ ಉಪವಾಸ ಮಾಡುವುದು, ಪ್ರಾತಃಕಾಲ ನಿತ್ಯಕರ್ಮ ಮುಗಿಸಿ, ವ್ರತಸಂಕಲ್ಪ ಮಾಡಿ, ಶುದ್ಧ, ಸ್ವಚ್ಛಂದವಾದ ಸ್ಥಳದಲ್ಲಿ ಲಿಂಗ ಸ್ಥಾಪಿಸಿ ಪೂಜೆ ಮಾಡುವುದು, ನುಡಿಗೊಮ್ಮೆ ನಡೆಗೊಮ್ಮೆ ಶರಣನೆನ್ನತ್ತಾ ಅಕ್ಕಿ, ಶ್ರೀಗಂಧ, ಕರೆಯೆಳ್ಳು, ಅರ್ಘ್ಯ-ಪಾದ್ಯ-ಆಚಮನ, ಪಂಚಾಮೃತ, ಕಮಲದ ಹೂವು, ಸಕಲಪುಷ್ಪ, ಧೂಪ, ದೀಪ ಕಾಯಿ-ಕರ್ಪೂರಾದಿಗಳಿಂದ ಪೂಜಿಸಲಾಗುತ್ತದೆ. ಈ ಕಾರ್ಯ ಗುರುಗಳ ಮುಖೇನವಾಗಿ ನಡೆದು ಪ್ರಸಾದ ಉಣಬಡಿಸುವುದು ಮತ್ತು ತಮ್ಮ ಶಕ್ತ್ಯಾನುಸಾರ ಗುರುಗಳಿಗೆ ದಾನ ಮಾಡುವುದು ವಾಡಿಕೆ, ರಾತ್ರಿಯಿಡಿ ಶಿವಭಜನೆ, ಶಿವಕಿರ್ತನೆ, ಶಿವಕಥಾಸಾರ ಹೀಗೆ ಅನನ್ಯ ರೀತಿಯಿಂದ ಶಿವನನ್ನು ಭಜಿಸುವ ಮೂಲಕ ಆರಾಧಿಸಲಾಗುತ್ತದೆ.
ಬೆಳಗ್ಗೆಯಿಂದಲೇ ವಿಶೇಷ ಪೂಜೆ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಾಗೂ ಪ್ರತಿ ಗ್ರಾಮಗಳಲ್ಲಿಯೂ ಬೆಳಗ್ಗೆಯಿಂದಲೇ ಶಿವನ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಆಚರಣೆ, ದೇವರಿಗೆ ವಿಶೇಷ ಅಭಿಷೇಕದ ಕಾರ್ಯಕ್ರಮ ಜರುಗಿದವು. ವೃದ್ಧರು, ಮಹಿಳೆಯರು ಮಕ್ಕಳು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.
ವೈಜ್ಞಾನಿಕ ಹಿನ್ನೆಲೆ: ಪೂರ್ವಿಜರು ಆಚರಿಸುತ್ತ ಬಂದಿರುವ ಎಲ್ಲ ಹಬ್ಬಗಳು ಆರೋಗ್ಯದ ದೃಷ್ಟಿಯಿಂದಲೂ ಬಂದವುಗಳಾಗಿವೆ. ಅಂಥವುಗಳಲ್ಲಿ ಮಹಾಶಿವರಾತ್ರಿಯೂ ಒಂದು. ಶಿವರಾತ್ರಿಯ ದಿನ ಚಳಿಗಾಲ ಮುಗಿದು ಬೇಸಿಗೆಕಾಲ ಆರಂಭವಾಗುತ್ತದೆ. ಪ್ರಕೃತಿ ಬದಲಾವಣೆಯಿಂದ ಮಾನವನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಅಂದರೆ ಈ ದಿನದಲ್ಲಿ ನೆಗಡಿ, ಕೆಮ್ಮು ಅತಿಯಾದ ತಾಪಕ್ಕೆ ಒಮ್ಮೆಲೆ ಗುರಿಯಾಗುವುದರಿಂದ ಈ ರೀತಿಯಾದ ಕಾಯಿಲೆಗಳು ಆವರಿಸುತ್ತವೆ. ಇದನ್ನು ತಡೆಯುವಲ್ಲಿ ಬಿಲ್ವಪತ್ರಿಯನ್ನು ಶಿವನಿಗೆ ಧರಿಸುತ್ತಾ ದೇಹದೊಳಗೆ ಅದರ ವಾಸನೆ ಸೆಳೆದುಕೊಳ್ಳತ್ತದೆ. ಅದನ್ನೇ ಸೇವಿಸುವುದರಿಂದ ಆರೋಗ್ಯಕ್ಕೆ ಉಪಯುಕ್ತಕರವಾಗಿದೆ. ರುದ್ರವನ್ನು ಹೇಳುವುದರಿಂದ ವಾಯುವಿನ ಆಗಮನ, ನಿರ್ಗಮನಗಳಿಂದ ಶರೀರ ಹೊಸಕಾಲಕ್ಕೆ ಹೊಂದಿಕೊಂಡು ವಜ್ರಕಾಯವಾಗುತ್ತದೆ ಎನ್ನುವದನ್ನು ವೈಜ್ಞಾನಿಕ ಹಿನ್ನೆಲೆ ತಿಳಿಸುತ್ತದೆ.
ವಿಶೇಷ ಪೂಜೆ: ನಗರದ ಐತಿಹಾಸಿಕ ದೇವಾಲಯ ತ್ರಿಕೂಟೇಶ್ವರ, ವೀರನಾರಾಯಣ ದೇವಸ್ಥಾನ, ಸಾಯಿ ಮಂದಿರ, ವೀರೇಶ್ವರ ಪುಣ್ಯಾಶ್ರಮ, ಕಾಶೀ ಅಧ್ಯಯನ ಪೀಠದಲ್ಲಿರುವ ಶಿವನ ದೇವಸ್ಥಾನ, ಗದಗ ತಾಲೂಕಿನ ಕಪ್ಪತ್ತಗುಡ್ಡ ಭಾಗದಲ್ಲಿರುವ ಜಲಾಶಂಕರ ದೇವಸ್ಥಾನ, ಮುಂಡರಗಿ ತಾಲೂಕಿನ ಸಿಂಗಟಾಲೂರಿನ ವೀರಭದ್ರೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರ, ಗೋಲಾಳೇಶ್ವರ ದೇವಸ್ಥಾನ, ಲಕ್ಷ್ಮೀನಿಂಗನಗುಡಿ, ಬಾಳೇಶ್ವರ ಮಠ, ಶಿರಹಟ್ಟಿಯ ವರವಿ ಮೌನೇಶ್ವರ ದೇವಸ್ಥಾನ, ನರಗುಂದದ ಶಂಕರಲಿಂಗ ದೇವಸ್ಥಾನ, ಕಲ್ಮೇಶ್ವರ, ಮಂಜುನಾಥ, ಕೊಣ್ಣೂರಿನ ರಾಮಲಿಂಗ ದೇವಸ್ಥಾನ, ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಮುಂಡರಗಿಯ ಅನ್ನದಾನೀಶ್ವರ ಮಠ, ಈಶ್ವರ ದೇವಸ್ಥಾನ, ಬ್ಯಾಲವಾಡಗಿ ಈಶ್ವರ ದೇವಸ್ಥಾನ ಹಾಗೂ ವಿಠ್ಠಲಾಪುರ ರಸಲಿಂಗ ದೇವಸ್ಥಾನ, ಮುಷ್ಟಿಕೊಪ್ಪದ ಲಕ್ಷ್ಮೀವೆಂಕಟೇಶ    ದೇವಸ್ಥಾನ, ಸೇರಿದಂತೆ ಗ್ರಾಮದ ಎಲ್ಲ ಶಿವಾಲಯ, ಈಶ್ವರ ದೇವಸ್ಥಾನಗಳಿಗೆ ಭಕ್ತರು ವಿಶೇಷ ಪೂಜೆ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಅಭಿಷೇಕ, ಮಹಾಮಂಗಳಾರತಿ ಸಲ್ಲಿಸಿದರು.

ಗಜೇಂದ್ರಗಡ: ಶಿವರಾತ್ರಿ ಆಚರಣೆ
ಗಜೇಂದ್ರಗಡ: ಪಟ್ಟಣದ ದೇವಾಲಯಗಳಲ್ಲಿ ಶಿವಾಷ್ಠಕ ಶ್ತೋತ್ರಗಳೊಂದಿಗೆ ಜನರು ಪರಮಾತ್ಮನ ಆರಾಧನೆ ಮಾಡುವ ಮೂಲಕ ಮಹಾಶಿವರಾತ್ರಿ ಆಚರಿಸಿದರು.
ಅಸಂಖ್ಯಾತ ಭಕ್ತರು ಐತಿಹಾಸಿಕ ದೇಗುಲಕ್ಕಾಗಮಿಸಿ ಕಾಲಕಾಲೇಶ್ವರ ದೇವರ ವಿಶೇಷ ದರ್ಶನ ಪಡೆದರು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಹಾಗೂ ನಾಡಿನ ವಿವಿಧ ಭಾಗಗಳ ಜನ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಸುತ್ತಲಿನ ಗ್ರಾಮಗಳ ಯುವಕರ ತಂಡಗಳು, ರೈತ ಕುಟುಂಬದ ಮಹಿಳೆಯರು, ಮಕ್ಕಳು ಹಿರಿಯರು ಪಾದಯಾತ್ರೆ ಮೂಲಕ ಬೆಟ್ಟದ ಮೆಟ್ಟಿಲುಗಳನ್ನೇರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿಯಿಡಿ ಶಿವರಾತ್ರಿ ವಿಶೇಷ ಸಾಮೂಹಿಕ ಜಾಗರಣೆ, ಆರಾಧನೆ, ಭಜನೆ ನಡೆಸಿದರು. ಕಾಲಕಾಲೇಶ್ವರ ಪುಣ್ಯ ಕ್ಷೇತ್ರದಲ್ಲಿ ಅಹೋರಾತ್ರಿ ಶಿವನ ಕಥಾ ಶ್ರವಣ, ರುದ್ರಾದ್ಯಾಯ, ಪುರುಷ ಸ್ತೋತ್ರ ಪಠಣದೊಂದಿಗೆ ದ್ಯಾನ, ಜಪ ತಪಗಳು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಅರ್ಚಕರಾದ ಕಲ್ಲಂಭಟ್ರ, ಮಲ್ಲಯ್ಯಸ್ವಾಮಿ ಪೂಜಾರ ಅವರಿಂದ ನೆರವೇರಿದವು.
ನಾನಾ ದೇಗುಲದಲ್ಲಿ ಪೂಜೆ: ಸೂಡಿ ಗ್ರಾಮದ ಶಿವಚಿದಂಬರ ದೇವಸ್ಥಾನ ಸೇರಿದಂತೆ ಪಟ್ಟಣದ ಗಣಪತಿ, ವಿರೂಪಾಕ್ಷೇಶ್ವರ, ರಾಮ ಮಂದಿರ, ವಿಠಲ್ ದೇವರ ಗುಡಿ, ಜಗದಂಬಾ, ಹಿರೇ ದುರ್ಗಾದೇವಿ ದೇಗುಲದಲ್ಲಿ ಬೆಳಗಿನ ಜಾವ ಭಕ್ತರು ರುದ್ರಾಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ ಪೂಜೆ ಸಲ್ಲಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಜ್ಞಾನ ಅನಭೂತಿ ಕಾರ್ಯಕ್ರಮ ಜನಮನ ಸೆಳೆಯಿತು. ಮಹಾ ಶಿವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ದ್ರಾಕ್ಷಿ, ಸೇಬು, ಬಾಳೆಹಣ್ಣು, ಕಲ್ಲಂಗಡಿ, ಕರಬೂಜ, ಖರ್ಜೂರ ಹಣ್ಣುಗಳ ಮಾರಾಟ ಜೋರಾಗಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement