ಸರಳ ಆಹಾರ ಸೇವನೆಯೇ ಆರೋಗ್ಯದ ಗುಟ್ಟು
ಶಿರಹಟ್ಟಿ: ಸರಳ ಸಹಜ ಅಲ್ಪ ಆಹಾರ ಸೇವನೆ ಮಾಡುತ್ತ ಸರ್ವರಿಗೂ ಸದಾ ಒಳಿತನ್ನೇ ಬಯಸುತ್ತಾ ಮಾದರಿಯ ಜೀವನ ನಡೆಸುತ್ತಿದ್ದರೆ, ಯೋಗ ಮತ್ತು ಪ್ರಾಣಾಯಾಮ ಮಾಡುವುದಕ್ಕಿಂತಲೂ ಹೆಚ್ಚು ಶಾಂತ ಮತ್ತು ಆರೋಗ್ಯಪೂರ್ಣ ಜೀವನ ಮಾಡಬಹುದು ಎಂದು ಬಸವ ಪತಂಜಲಿ ಯೋಗ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ ಹೇಳಿದರು.
ಅವರು ಗುರುವಾರ ಪತಂಜಲಿ ಯೋಗ ಸಮಿತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದ ಎಫ್ಎಂ ಡಬಾಲಿ ಹೈಸ್ಕೂಲ್ ಮೈದಾನದಲ್ಲಿ 8 ದಿನಗಳ ವರೆಗೆ ಜರುಗಿದ ಉಚಿತ ಯೋಗ, ಪ್ರಾಣಾಯಾಮ ಹಾಗೂ ನಿಸರ್ಗ ಚಿಕಿತ್ಸೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯೋಗ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿ. ಆಧುನಿಕ ಶೈಲಿಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಗಟ್ಟಿ ಆಹಾರ ಪದ್ಧತಿ ತ್ಯಜಿಸಿ, ಬೇಕರಿ ತಿನಿಸುಗಳಿಗೆ ಮಾರುಹೋಗುತ್ತಿದ್ದೇವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅತೀ ಮಸಾಲೆ ಹೊಂದಿರುವ ಆಹಾರದಿಂದ ತೊಂದರೆಯಾಗುತ್ತಿದೆ. ಮಹಿಳೆಯರಿಗೆ ಯೋಗ ಕಲಿಸುವುದು ಅವಶ್ಯವಾಗಿದೆ. ಶಾಲೆಯಲ್ಲೂ ಯೋಗ ಶಿಕ್ಷಣ ಬೋಧನೆ ಕಡ್ಡಾಯಗೊಳಿಸಬೇಕು ಎಂದರು. ಯೋಗ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ. ಶಿಬಿರದಲ್ಲಿ ನೀಡುವ ಮಾಹಿತಿ ಅಳವಡಿಸಿಕೊಂಡು, ಮಕ್ಕಳಿಗೂ ತಿಳಿಸಿರಿ. ಪಟ್ಟಣದಲ್ಲಿ ನಿರಂತರ ಯೋಗ ಪ್ರಾಣಾಯಾಮಗಳು ನಡೆಯುವಂತೆ ವ್ಯವಸ್ಥೆಗೆ ಮುಂದಾಗಬೇಕು. ಕಲಿಕೆಗೆ ಯಾವುದೇ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಯೋಗ ಗುರು ವೀರೇಶ ಗುರೂಜಿ ಮಾತನಾಡಿ, ಯೋಗ ಪಾಶ್ಚಿಮಾತ್ಯ ದೇಶದಲ್ಲಿ ನಾಗಾಲೋಟದಲ್ಲಿ ಬೆಳವಣಿಗೆ ಹೊಂದುತ್ತಿದೆ. ಯೋಗದಲ್ಲಿ ಹೊಸ ಅವಿಷ್ಕಾರಗಳನ್ನು ಪಾಶ್ಚಿಮಾತ್ಯರು ಶೋಧಿಸಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇದನ್ನು ಬೆಳಕಿಗೆ ತಂದ ಭಾರತದಲ್ಲಿ ಮಾತ್ರ ಯೋಗ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಹೊಂದಿಲ್ಲ. ವಿದ್ಯಾರ್ಥಿಗಳಿಗೆ ಯೋಗ ಕಲಿಸಬೇಕು ಎಂದರು. ಮುಳಗುಂದ ಜ್ಞಾನ ಯೋಗಾಶ್ರವುದ ಬ್ರಹ್ಮಾನಂದ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸವಾನಂದ ಶರಣರು ನೇತೃತ್ವ ವಹಿಸಿದ್ದರು. ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಈರಣ್ಣ ತಡಸದ, ಪಪಂ ಸದಸ್ಯೆ ಲಲಿತ ಕಲ್ಲಪ್ಪನವರ, ಪುಷ್ಪಾ ವಿಶ್ವಜ್ಞ, ಬಿ.ಸಿ. ಮೇಟಿ, ಕರವೇ ಅಧ್ಯಕ್ಷ ಸುನೀಲ ಪವಾರ, ಯೋಗಿತ ದೇಸಾಯಪಟ್ಟಿ, ಶಕುಂತಲಾ ಎಚ್.ಸಿ., ನಗೀನಾ ಲಕ್ಷ್ಮೇಶ್ವರ ಮುಂತಾದವರು ಮಾತನಾಡಿದರು. ಎಸ್.ವೈ. ಪಾಪನೂರ, ಉಮಾ ಉತ್ತಂಗಿ, ಬಸವರಾಜ ತುಳಿ, ಜಿ.ಎಚ್. ಗಂಜೇಂದ್ರಗಡ, ಎಂ.ಎಸ್. ಗೋದಿ, ಪ್ರಭುಲಿಂಗ ಹಲಸೂರ, ಯೋಗ ಶಿಕ್ಷಕಿ ಗೌರಮ್ಮ ಸಂಗಪ್ಪಶೆಟ್ಟರ, ಶಕುಂತಲಾ ಹೊಳಲದ, ಎಂ.ಕೆ. ಲಮಾಣಿ ಮುಂತಾದವರನ್ನು ಸನ್ಮಾನಿಸಲಾಯಿತು. ಶಂಭು ವಿಭೂತಿ, ಅನಸೂಯಾ ಪಲ್ಲೇದ, ನೀತಾ ಮಟ್ಟಿ, ಉಮೇಶ ಹೈಗರ, ಅಶ್ವಿನಿ ಎಂ.ಸ್ವಾಮಿ, ಸುನೀತಾ ಮೊರಬದ, ಸುರೇಶ ಸರ್ಜಾಪುರ, ರಹನಾ ಒಂಟಿ, ನಾರಾಯಣ, ಸಿಂಗಟಾಲೂರ, ಎಚ್.ಟಿ. ಬಿಜ್ಜೂರ, ನಾಗಪ್ಪ ಗಾಡಿಯವರ, ರಮೇಶ ಕಲ್ಲಪ್ಪನವರ, ಸಿದ್ದಯ್ಯ ಮ್ಯಾಗೇರಿಮಠ ಇತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.