ಮಾನಸಿಕ ಖಿನ್ನತೆ: ಮಹಿಳೆ ನೇಣಿಗೆ ಶರಣು
ಲಕ್ಷ್ಮೇಶ್ವರ: ವಿಕಲಾಂಗ ಮಗು ಜನನದಿಂದ ಮಾನಸಿಕವಾಗಿ ಕಿನ್ನತೆಗೊಳಗಾಗಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ನತದೃಷ್ಟ ಮಹಿಳೆಯನ್ನು ಶಾರದಾ ಗಂಗಾಧರ ಮಜ್ಜಗಿ (29) ಎಂದು ಗುರುತಿಸಲಾಗಿದ್ದು, ಮೃತಳ ಪತಿ ಪಟ್ಟಣದ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೇದೆ ಗಂಗಾಧರ ಬೆಳಗ್ಗೆ ಕಾರ್ಯ ನಿಮಿತ್ತ ಕಚೇರಿಗೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ವಿಕಲಾಂಗ ಮಗುವಿನ ಅಳುವನ್ನು ಕೇಳಿದ ಸಾರ್ವಜನಿಕರು ಮನೆಯೊಳಗೆ ಹೋಗಿ ನೋಡಿದಾಗ ಮಹಿಳೆ ನೇಣಿಗೆ ಶರಣಾಗಿದ್ದ ವಿಷಯ ತಿಳಿದಿದೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಮಕ್ಕಳ ಬಗ್ಗೆ ಮಾನಸಿಕವಾಗಿ ನೊಂದುಕೊಂಡಿದ್ದ ಮೃತಳಿಗೆ ಇಬ್ಬರು ಗಂಡು ಮಕ್ಕಳಿದ್ದು ಅದರಲ್ಲಿ ಸಣ್ಣ ಮಗುವಿನ ಮೊಣಕೈ ನಂತರದ ಭಾಗವು ಸರಿಯಾಗಿ ಬೆಳವಣಿಗೆಯಾಗಿಲ್ಲ. ಇದನ್ನು ಬಹಳವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದಳು ಎಂದು ನೆರಹೊರೆಯವರು ಹೇಳುತ್ತಾರೆ. ಸುದ್ದಿ ತಿಳಿದ ನಂತರ ಡಿವೈಎಸ್ಪಿ ವಿಜಯ ಡಂಬಳ, ಸಿಪಿಐ ಶ್ರೀನಿವಾಸ ಮೇಟಿ ಹಾಗೂ ಪಿಎಸ್ಐ ವಿಕಾಸ ಲಮಾಣಿ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ವಾಹನ ಡಿಕ್ಕಿ: ವೃದ್ಧೆ ಸಾವು
ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ದೊಡ್ಡೂರ ರಸ್ತೆಯ ಮೇಲೆ ಪೂರ್ಣಾಜಿ ಖರಾಠೆ ತೋಟದ ಹತ್ತಿರ ಅಪರಿಚಿತ ವಾಹನ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ಜರುಗಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆಯ ದೇಹದಿಂದ ರುಂಡ ಬೇರೆಯಾಗಿದ್ದ ಭೀಕರ ದೃಶ್ಯವನ್ನು ನೋಡಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ. ಅಲ್ಲದೆ, ಬಿಡಾಡಿ ನಾಯಿಗಳು ಮೃತಳ ತಲೆಯ ಭಾಗವನ್ನು ತಿಂದು ಹಾಕಿದ್ದವು ಎನ್ನಲಾಗಿದೆ. ಮೃತ ಮಹಿಳೆ ಹೆಸರು, ವಿಳಾಸ ತಿಳಿದು ಬಂದಿಲ್ಲ. ಅಲ್ಲದೆ, ಮಹಿಳೆಯ ಬಟ್ಟೆಯನ್ನು ನೋಡಿದಾಗ ಮೃತಳು ಯಲ್ಲಮನ ಭಕ್ತೆಯಾಗಿದ್ದು, ತಲೆಯಲ್ಲಿ ಉದ್ದನೆಯ ಜಡೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೊಲೀಸರು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪಿಎಸ್ಐ ವಿಕಾಶ ಲಮಾಣಿ ಸುದ್ದಿಗಾರರಿಗೆ ತಿಳಿಸಿದರು.
ಅಕ್ರಮ ಸಾರಾಯಿ ಮಾರಾಟ: ಇಬ್ಬರು ಪರಾರಿ
ಗದಗ: ಶಹರದ ಗಂಗಾಪುರ ಪೇಟಿಯಲ್ಲಿನ ಅಝಾದ ಬ್ಯಾಂಕ್ ಹತ್ತಿರ ಇರುವ ಅಕ್ಷಯ ಹೊಟೇಲ್ ಮುಂದೆ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಶಹರದ ನಿವಾಸಿಗಳಾದ ಶಂಕರಸಾ ಯಮುನರಸಾ ಮಿಸ್ಕೀನ್ ಹಾಗೂ ಲಕ್ಷ್ಮಣ ನಾಗಪ್ಪ ವಾಲ್ಮೀಕಿ ಪರಾರಿಯಾಗಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರೂ ಪಾಸ್ ಮತ್ತು ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದರು. ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಸಾರಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಟ್ಕಾ: ಓರ್ವನ ಬಂಧನ
ಗದಗ: ಶಹರದ ಶಿವಸಾಗರ ಹೊಟೇಲ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ದಾಸರ ಓಣಿಯ ನಿವಾಸಿ ಸಂತೋಷ ಹನುಮಂತಸಾ ಭಾಂಡಗೆ ಬಂಧಿತ ಆರೋಪಿ. ಬಂಧಿತನಿಂದ ದಸ್ತಗೀರ ಮಾಡಿ ಸುಮಾರು ರು. 1700 ಮತ್ತು ಓಸಿ ಬರೆದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.