ರು. 1.30 ಕೋಟಿಯಲ್ಲಿ ರಸ್ತೆ ನಿರ್ಮಾಣ
ರೋಣ: ಪಟ್ಟಣದ ಮುಲ್ಲಾನಬಾವಿ ವೃತ್ತದಿಂದ ರಾಜೀವ್ಗಾಂಧಿ ಆಯುರ್ವೇದಿಕ್ ಆಸ್ಪತ್ರೆ ವರೆಗೆ ರು. 1.30 ಕೋಟಿ ವೆಚ್ಚದಲ್ಲಿ ಜೋಡು (ಒನ್ ವೇ) ರಸ್ತೆ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಶುಕ್ರವಾರ ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಭೂಸೇನಾ ನಿಗಮ ಆಶ್ರಯದಲ್ಲಿ ಪಟ್ಟಣದ 10, 11, 23 ಮತ್ತು 16ನೇ ವಾರ್ಡ್ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ಡಬಲ್ ರಸ್ತೆ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಜೋಡು ರಸ್ತೆಯು 30್ಗ30 ಅಳತೆಯುಳ್ಳದ್ದಾಗಿದ್ದು, ರಸ್ತೆ ಮಧ್ಯದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಆದ್ದರಿಂದ ಈ ರಸ್ತೆಯ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲಾಗುವುದು. ಅಲ್ಲಿನ ವ್ಯಾಪಾರಸ್ಥರು ಸಹಕರಿಸಬೇಕು. ಅಲ್ಲಿನ ಗೂಡಂಗಡಿ ವ್ಯಾಪಾರಸ್ಥರಿಗೆ ಪರ್ಯಾಯವಾಗಿ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು. ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ನಗರದಿಂದ ಮುದೇನಗುಡಿ ಸಂಪರ್ಕ ರಸ್ತೆ ವರೆಗೆ ರಿಂಗ್ ರೋಡ್ನ್ನು ನೀರಾವರಿ ಇಲಾಖೆಯ ಎಸ್ಸಿಪಿ ಯೋಜನೆಯಡಿ ರು. 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಜನತಾ ಪ್ಲಾಟ್ನಲ್ಲಿ ಎಸ್ಸಿಪಿ ಯೋಜನೆಯಡಿ 11ನೇ ವಾರ್ಡಿನ ಕೊರವರ ಆಶ್ರಯ ಕಾಲೋನಿಯಲ್ಲಿ ರು. 50 ಲಕ್ಷದಲ್ಲಿ 7 ಒಳ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ನಿರ್ಮಿಸಲಾಗುವುದು ಎಂದರು.
ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಜಿಗಳೂರು ಹತ್ತಿರದ 350 ಎಕರೆ ಬೃಹತ್ ಕೆರೆ ನಿರ್ಮಾಣ ಶೀಘ್ರ ಗತಿಯಲ್ಲಿ ಸಾಗುವಂತೆ ಹೆಚ್ಚುವರಿಯಾಗಿ ರು. 40 ಕೋಟಿ ಮಂಜೂರು ಮಾಡಲಾಗಿದೆ. ಈ ಕೆರೆಯಿಂದ ಗಡೇಂದ್ರಗಡ, ನರೇಗಲ್, ರೋಣ ಸೇರಿ 7 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದರು. ಮುತ್ತಣ್ಣ ಸಂಗಳದ, ಲಕ್ಷ್ಮೀ ಗಡಗಿ, ಅಜ್ಜಪ್ಪ ರಡ್ಡೇರ, ತೋಟಪ್ಪ ನವಲಗುಂದ, ಮಂಜುನಾಥ ಹಾಳಕೇರಿ, ಗಂಗಮ್ಮ ಹಾದಿಮನಿ, ಇತರರಿದ್ದರು.