ಶಿಕ್ಷಕರಲ್ಲಿ ಪರಿಸ್ಥಿತಿ ನಿರ್ವಹಣೆ ಕೊರತೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 28
ಶಿಕ್ಷಕರಲ್ಲಿ ಪರಿಸ್ಥಿತಿಯ ಸೂಕ್ತ ನಿರ್ವಹಣೆಯ ಕೊರತೆ ಎದ್ದುಕಾಣುತ್ತಿದ್ದು, ಈ ಕುರಿತು ಶಿಕ್ಷಕರು ಗಂಭೀರ ಚಿಂತನೆ ನಡೆಸುವುದು ಅವಶ್ಯವಿದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಪ್ರೌಢಶಾಲಾ ಮಂಡಳಿ ಗದಗ ಮತ್ತು ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ಆಶ್ರಯದಲ್ಲಿ ಪ್ರೌಢಶಾಲಾ ಶಿಕ್ಷಕರ ಜಿಲ್ಲಾ ಶೈಕ್ಷಣಿಕ ಸಮಾವೇಶ, ಗುಣಮಟ್ಟದ ಶಿಕ್ಷಣ ಕುರಿತು ಚಿಂತನಗೋಷ್ಠಿ, ಗೌರವ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಲ್ಲಿ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ರಂಗದಲ್ಲಿ ಸಂಘಟನೆ ಎಂಬುದು ಅತ್ಯವಶ್ಯ. ಸಂಘಟನೆಯಿದ್ದರೆ ಮಾತ್ರ ನಾವೆಲ್ಲರೂ ಒಗ್ಗೂಡಿ ಶಿಕ್ಷಕರಿಗೆ ಆಗುವ ತೊಂದರೆಗಳ ವಿರುದ್ಧ ಹೋರಾಡಬಹುದಾಗಿದೆ. ಈ ಕುರಿತು ಶಿಕ್ಷಕರು ಅರಿತುಕೊಳ್ಳುವುದು ಅವಶ್ಯವಾಗಿದೆ.
ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರ ಶಿಕ್ಷಕರಿಗೆ ಬೇಕಾದ ಸೌಲಭ್ಯ ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ, ಈಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೊಳಪಡಿಸಿಕೊಳ್ಳುವಲ್ಲಿ ಸರ್ಕಾರ ಆಸಕ್ತಿ ವಹಿಸದಿರುವುದು ನೋವಿನ ಸಂಗತಿ ಎಂದರು.
ಈಗಾಗಲೇ ಸರ್ಕಾರ ರು. 1 ಲಕ್ಷ 58 ಸಾವಿರ ಕೋಟಿ ಸಾಲವನ್ನು ಅನುಭವಿಸುತ್ತಿರುವುದು ನೋವಿನ ಸಂಗತಿ. ಈಚೆಗೆ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗೆ, ಹೊಸ ಯೋಜನೆಗಳಿಗೆ ಸರ್ಕಾರ ಸಾವಿರಾರು ಕೋಟಿ ಮೀಸಲಿಟ್ಟಿದೆ. ಆದರೆ, ಖಾಸಗಿ ಸಂಸ್ಥೆಗಳ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಸರ್ಕಾರವು ನೀಡದೇ ಮೋಸ ಮಾಡುತ್ತಿದ್ದು, ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಹಿಂದಿನ ಶೈಕ್ಷಣಿಕ ವ್ಯವಸ್ಥೆಗೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೆ, ಇಂದಿನ ಮಕ್ಕಳ ಮನಸ್ಸು ಮೃದುವಾಗಿದ್ದು, ಶಿಕ್ಷಕರಾಗಲಿ ಇಲ್ಲವೇ ಪಾಲಕರು ವಿದ್ಯಾರ್ಥಿಗಳೊಂದಿಗೆ ಒರಟಾಗಿ ನಡೆದುಕೊಂಡಾಗ ವಿದ್ಯಾರ್ಥಿಗಳು ಆತ್ಮಹತ್ಯೆ, ಮನೆ ಬಿಟ್ಟುಹೋಗುವಂತಹ ಸಂಸ್ಕೃತಿ ಕಂಡುಬರುತ್ತಿರುವುದು ನೋವಿನ ಸಂಗತಿ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ. ಈ ಕುರಿತು ಸಂಘಟನೆಗಳು ಆಸಕ್ತಿ ವಹಿಸಿ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸುವಲ್ಲಿ ಶ್ರಮಿಸುವಂತೆ ಕರೆನೀಡಿದರು.
ಡಾ. ಕೆ.ಪಿ. ಪುತ್ತೂರಾಯ ಖಾಸಗಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮಸ್ಯೆಗಳು ಹಾಗೂ ಸವಾಲು ಕುರಿತು ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಗದಗ ಜಿಲ್ಲಾ ಖಾಸಗಿ ಶಿಕ್ಷಕ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಡಾ. ಡಿ.ಬಿ. ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊರಟ್ಟಿ, ಎಸ್.ಟಿ. ಬ್ಯಾಕೋಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ವಿ. ರಾಜೇಂದ್ರಪ್ರಸಾದ, ಐ.ಬಿ. ಬೆನಕೊಪ್ಪ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಜಿ.ಎಸ್. ಶಿರಸಿ, ಎಸ್.ಎಂ. ಕೊಟಗಿ, ಕೆ.ಬಿ. ಭಜಂತ್ರಿ, ಕೆ.ಎ. ಹಿರೇಮಠ, ಎಸ್.ಎಚ್. ಅಬ್ಬಿಗೇರಿ, ಎಂ.ಕೆ. ಲಮಾಣಿ, ಬಿ.ಆರ್. ಪಾಟೀಲ, ಎ.ಬಿ. ಹೊನ್ನವಾಡ, ಬಿ.ಕೆ. ಪಾಟೀಲ, ಪಿ.ಜಿ. ಯಲವಗಿ, ಎಂ.ಎಚ್. ಅಂಗನಕಟ್ಟಿ, ಎಸ್.ವೈ. ಅಣ್ಣಿಗೇರಿ, ಎಸ್.ಎಂ. ಅಗಡಿ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಚಿನ್ನೂರ ಸ್ವಾಗತಿಸಿದರು. ಗೀತಾ ಮೆಣಸಿನಕಾಯಿ ನಿರೂಪಿಸಿದರು.