ಸಾರಾಯಿ ಮಾರಾಟ ನಿಲ್ಲಿಸಿ: ಮನವಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 28
ಮದ್ಯ ವ್ಯಸನಿಗಳ ಹಾವಳಿಯಿಂದಾಗಿ ದಿನೇ ದಿನೇ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಗ್ರಾಮದಲ್ಲಿ ಸಾರಾಯಿ ಮಾರಾಟ ನಿಲ್ಲಿಸಬೇಕು ಎಂದು ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ ಆಗ್ರಹಿಸಿದ್ದಾರೆ.
ತಾಲೂಕಿನ ಅಡವಿಸೋಮಾಪುರದ ಗ್ರಾಪಂನಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಕುಡುಕರ ಹಾವಳಿಯಿಂದಾಗಿ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಸಾರಾಯಿ ಮಾರಾಟ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ನೀವೇ ಕಾರಣರು. ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವವರನ್ನು ಸಭೆಗೆ ಕರೆಸಿ ಸಾರಾಯಿ ಮಾರಾಟದಿಂದಾಗುವ ಅನಾಹುತಗಳನ್ನು ತಿಳಿಸಿ, ತಾವು ಬದುಕಿ ಬಾಳಲು ಸಮಾಜದಲ್ಲಿ ಸಾಕಷ್ಟು ಉದ್ಯೋಗಗಳಿವೆ. ಅವುಗಳನ್ನು ಅನುಸರಿಸಬೇಕೆಂದು ತಿಳಿವಳಿಕೆ ನೀಡಿದರು.
ಕುಡುಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಹೀಗಾಗಿ ರಾತ್ರಿ ಸಮಯದಲ್ಲಿ ಗ್ರಾಮಸ್ಥರಿಗೆ, ವಿಶೇಷವಾಗಿ ಮಹಿಳೆಯರಿಗೆ ತುಂಬಾ ತೊಂದರೆಗಳಾಗುತ್ತಿವೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹಾಗೂ ಅಧಿಕಾರಿಗಳಿಗೆ ಹೆದರಿಕೆ ಉಂಟಾಗಿದೆ. ಆದ್ದರಿಂದ ಸಾರಾಯಿ ಮಾರಾಟ ಮಾಡುವುದನ್ನು ನಿಲ್ಲಿಸಿ ಪರ್ಯಾಯ ಉದ್ಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಗ್ರಾಮದಲ್ಲಿ ಸಾರಾಯಿ ಮಾಡುವುದನ್ನು ಪುನಃ ಮುಂದುವರಿಸಿದ್ದಲ್ಲಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿದರೆ ಅವುಗಳಿಗೆ ನೀವೇ ಸಂಪೂರ್ಣ ಜವಾಬ್ದಾರರಾಗುತ್ತೀರಿ ಹಾಗೂ ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳೆಯರು, ಗ್ರಾಮಸ್ಥರು ಮುಂದಿನ ದಿನಮಾನಗಳಲ್ಲಿ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುವವರಿಗೆ ಹಾಗೂ ಕುಡಿದು ಬಂದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕರಿಯಪ್ಪ ಹೊಸಳ್ಳಿ ಮಾತನಾಡಿ, ಜಿಲ್ಲಾ ಕೇಂದ್ರದಿಂದ ಅತ್ಯಂತ ಸಮೀಪದಲ್ಲಿರುವ ಗ್ರಾಮದಲ್ಲಿ ಜನಪ್ರತಿನಿಧಿಗಳು ಅವ್ಯವಸ್ಥೆಯ ವಿರುದ್ದ ಹೋರಾಟ ಮಾಡಲು ಸಿದ್ಧರಾಗಿದ್ದು, ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
ಗ್ರಾಪಂ ಸದಸ್ಯ ಚನ್ನಪ್ಪ ಅಂಗಡಿ, ಎಸ್.ಡಿ. ತಳವಾರ, ಧನಸಿಂಗ್ ಕಾರಬಾರಿ, ಕಾರ್ಯದರ್ಶಿ ಕೆ.ಎಸ್. ಹಾದಿಮನಿ, ಗಂಗಮ್ಮ ದೊಡ್ಡಮನಿ, ಕಲ್ಲವ್ವ ತಳವಾರ ಮುಂತಾದವರು ಉಪಸ್ಥಿತರಿದ್ದರು.