ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತನ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲಿ

Lingaraj Badiger
Updated On : 2 Jan 2014, 12:37 pm

ಕನ್ನಡಪ್ರಭ ವಾರ್ತೆ, ಗದಗ, ಜ. 1
ರೈತ ಉತ್ಪಾದಿಸುವ ಧಾನ್ಯಗಳ ಸಂರಕ್ಷಣೆಗೆ ಗ್ರಾಮ ಮಟ್ಟದಲ್ಲಿ ಶೀತಲಿಕರಣ ಕೇಂದ್ರ, ಗೋದಾಮುದಂತಹ ಸಂಗ್ರಹಾಗಾರಗಳು ನಿರ್ಮಾಣವಾಗಬೇಕು ಹಾಗೂ ರೈತನ ಕೃಷಿ ಉತ್ಪಾದನೆಗೆ ನ್ಯಾಯಸಮ್ಮತ ಬೆಲೆ ದೊರಕಿಸಿಕೊಡುವ ಶಾಸನ ರೂಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಒತ್ತಾಯಿಸಿದರು.
ಅವರು ಮಂಗಳವಾರ ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಘಟಕದ ಪ್ರಥಮ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇಂದು ರೈತ ಅನೇಕ ಸಮಸ್ಯೆ ಎದುರಿಸುತ್ತಿದ್ದಾನೆ. ಉದ್ದಿಮೆದಾರರು ತಮ್ಮ ಉತ್ಪಾದನೆಗೆ ತಾವೇ ಬೆಲೆ ನಿಗದಿ ಮಾಡುವಂತೆ ರೈತ ತಾನು ಬೆಳೆದ ಬೆಳೆಗಳಿಗೆ ತಾನೇ ದರ ನಿಗದಿ ಮಾಡುವಂತಾಗಬೇಕು. ಬೆಳಗಾವಿ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ರಾಜ್ಯ ಸರ್ಕಾರ ರೈತನನ್ನು ಸಂಪೂರ್ಣ ನಿರ್ಲಕ್ಷಿಸಿದೆ. ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕಾರಣ ರೈತ ಸಮುದಾಯ ಸಂಘಟಿತರಾಗಿ ತಮ್ಮ ಸಮಸ್ಯೆಗಳ ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ರೈತ ಮೋರ್ಚಾ ಹೆಚ್ಚು ಸಂಘಟನಾತ್ಮಕವಾಗಿ ಬಲಗೊಳ್ಳಬೇಕು ಎಂದರು.
ಬಿಜೆಪಿಯ ಹಾವೇರಿ ಲೋಕಸಭಾ ಮತಕ್ಷೇತ್ರದ ಉಸ್ತುವಾರಿ ಎಂ.ಎಸ್. ಕರಿಗೌಡರ ಮಾತನಾಡಿ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಭಾಗಗಳಲ್ಲಿ ಕಳಪೆ ಬೀಜಗಳನ್ನು ಮಾರಾಟ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಕಡೆಗಳಲ್ಲಿ ಅಸಮರ್ಪಕ ಮಳೆಯಿಂದಾಗಿ ಬರ ಎದುರಾಗಿದೆ. ನರಗುಂದದ ಹಲವು ಭಾಗದಲ್ಲಿ ಮಲಪ್ರಭಾ ಕಾಲುವೆ ಬಂದ ಮಾಡಿದ್ದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಶಿಂಗಟಾಲೂರ ಏತನೀರಾವರಿ ಯೋಜನೆ ಆಮೆಗತಿಯಲ್ಲಿ ಸಾಗಿದೆ. ಜಿಲ್ಲೆಯಲ್ಲಿ ರೈತ ಸಮುದಾಯ ಸಮಸ್ಯೆಗಳ ಸುಳಿಗೆ ಸಿಕ್ಕು ನರಳುತ್ತಿದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ್ದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಸ್. ಚಿಂಚಲಿ ಮಾತನಾಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿಕಾಂತ ಕುಲಕರ್ಣಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಅಜ್ಜಪ್ಪ ಹೊರಕೇರಿ, ಅಶೋಕ ನವಲಗುಂದ, ಮೋಹನ ಮಾಳಶೆಟ್ಟಿ, ಎಂ.ಎಂ. ಹಿರೇಮಠ, ಎನ್.ಎಂ. ಮಣ್ಣೂರ, ಸಿ.ಎಂ.ಪಟ್ಟಣಶೆಟ್ಟಿ, ಕಾಂತಿಲಾಲ್ ಬನ್ಸಾಲಿ, ನಗರಸಭೆ ಸದಸ್ಯ ಸದಾನಂದ ಪಿಳ್ಳೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement