ಮುಂಡರಗಿ ಬರಪೀಡಿತವೆಂದು ಘೋಷಿಸಿ
ಕನ್ನಡಪ್ರಭ ವಾರ್ತೆ, ಗದಗ, ಜ. 2
30-40 ವರ್ಷಗಳಿಂದ ರಾಜ್ಯದಲ್ಲಿಯೇ ಅತಿ ಬರಗಾಲ ಪ್ರದೇಶವೆಂದು ಪರಿಗಣಿಸಲ್ಪಟ್ಟಿರುವ ಮುಂಡರಗಿಯನ್ನು ಸರ್ಕಾರ ಬರಪೀಡಿತ ತಾಲೂಕೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಮುಂಡರಗಿ ತಾಲೂಕಿನ ರೈತರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಚಾಲನೆ ನೀಡಿದ ಮುಂಡರಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಮಾತನಾಡಿ, ಮಳೆಗಾಲಕ್ಕಿಂತ ಅಧಿಕವಾಗಿ ಬರಗಾಲವನ್ನು ಎದುರಿಸುತ್ತಿರುವ ಮುಂಡರಗಿ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ಕ್ರಮ ಖಂಡನೀಯ. ಸರ್ಕಾರ ಈ ಕೂಡಲೇ ಮುಂಡರಗಿ ತಾಲೂಕನ್ನು ಬರ ಪೀಡಿತವೆಂದು ಘೋಷಣೆ ಮಾಡದೇ ಇದ್ದಲ್ಲಿ ರೈತರು ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸಿ, ಸರ್ಕಾರದ ವಿರುದ್ಧ ಸಿಡಿದು ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಮಳೆಯಾಗದೇ ಮುಂಗಾರು-ಹಿಂಗಾರು ಬೆಳೆಗಳು ವಿಫಲವಾಗಿದೆ. ಸಾಲಸೂಲ ಮಾಡಿ ಭೂಮಿಯಲ್ಲಿ ಬೀಜ ಬಿತ್ತಿದ ರೈತರು ಸಾಕಷ್ಟು ತೊಂದರೆಯಲ್ಲಿದ್ದಾರೆ. ಈ ಹಿಂದೆ ಸರ್ಕಾರ 64 ತಾಲೂಕುಗಳನ್ನು ಘೋಷಣೆ ಮಾಡಿದಾಗಲೂ ಮುಂಡರಗಿ ತಾಲೂಕನ್ನು ಸೇರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ 34 ತಾಲೂಕುಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿಯೂ ಮುಂಡರಗಿ ತಾಲೂಕನ್ನು ಕೈ ಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ರೋಣ ಹಾಗೂ ಶಿರಹಟ್ಟಿ ಶಾಸಕರ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ತಾಲೂಕಿಗೆ ವಂಚನೆಯಾಗಿದೆ. 15 ದಿನಗಳಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಿಸದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ನಗರದ ತೋಂಟದಾರ್ಯ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಮಹೇಂದ್ರಕರ ವೃತ್ತ , ಟಾಂಗಾಕೂಟ, ಬಸವೇಶ್ವರ ವೃತ್ತ, ಪಂಚರೌಂಡ್, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಮುಳುಗುಂದ ನಾಕಾ ತಲುಪಿ, ಅಲ್ಲಿ ಕೆಲ ಸಮಯ ರಸ್ತೆತಡೆ ನಡೆಸಿ, ಅನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ರ್ಯಾಲಿಯಲ್ಲಿ ನಾರಾಯಣಪ್ಪ ಇಲ್ಲೂರ, ಈಶ್ವರಪ್ಪ ಹಂಚಿನಾಳ, ಅಂದಪ್ಪ ಬೆಲ್ಲದ, ಕರಬಸಪ್ಪ ಹಂಚಿನಾಳ, ಬಸವರಾಜ ನವಲಗುಂದ, ಬಸವಂತಪ್ಪ ಮುದ್ದಿ, ಎಸ್.ವಿ. ಪಾಟೀಲ, ಕರವೇ ಅಧ್ಯಕ್ಷ ಶಿವು ಬಾರಕೇರ, ಕನ್ನಡ ಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ, ಕೃಷ್ಣ ರಾಮೇನಹಳ್ಳಿ, ಗಣೇಶ ಹಾತಲಗೇರಿ, ಅಲ್ಲಬಕ್ಷಿ ಅಳವಂಡಿ, ಸುಭಾಷ ಮೂಲಿಮನಿ, ವೀರಪ್ಪ ಅಳವಂಡಿ, ಅಂದಪ್ಪ ಚಿಕ್ಕಣ್ಣವರ, ಯಲ್ಲಪ್ಪ ಹೂಲಗೇರಿ, ಶಿವಪ್ಪ ನಾಯ್ಕರ, ಹನುಮರಡ್ಡಿ ಮಾದನೂರ, ಸೋಮಪ್ಪ ಹಟ್ಟಿ, ಹನುಮಪ್ಪ ಹಲವಾಗಲಿ, ರಾಮಣ್ಣ ತಳವಾರ, ಗರಡಪ್ಪ ಜಂತ್ಲಿ, ದೇವೇಂದ್ರಪ್ಪ ಭಂಡಾರಿ, ಅಂದಾನಪ್ಪ ಅಳವಂಡಿ, ಕೇಮಯ್ಯ ಮುರುಡಿ, ಭೀಮವ್ವ ಗುಡಿಮನಿ, ದೇವಕ್ಕ ಮುರಡಿ, ಲಕ್ಷ್ಮವ್ವ ದೇವರಮನಿ, ಬಸವರಾಜ ಮುಂಡವಾಡ, ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.
ಬಿಜೆಪಿಯಿಂದ ಸಿಎಂಗೆ ಮನವಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 2
ಮುಂಡರಗಿ ತಾಲೂಕು ಬರ ಪೀಡಿತ ಎಂದು ಘೋಷಿಸಲು ಆಗ್ರಹಿಸಿ ಗುರುವಾರ ತಾಲೂಕು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದೇವಪ್ಪ ಇಟಗಿ ಮಾತನಾಡಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕು ಸತತವಾಗಿ ಬರಗಾಲಕ್ಕೆ ನಲುಗಿ ಹೋಗಿದೆ. ಇದರಿಂದ ಮುಂಡರಗಿ ತಾಲೂಕಿನ ರೈತರ ಬದುಕು ಶೋಚನೀಯವಾಗಿದೆ. ಜನಪ್ರತಿನಿಧಿಗಳ ಮತ್ತು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಮುಂಡರಗಿ ತಾಲೂಕಿನ ರೈತರು ಬೆಳೆದ ಫಸಲಿಗೆ ಸರಿಯಾದ ದರ ಸಿಗುತ್ತಿಲ್ಲ. ಮತ್ತೊಂದೆಡೆ ಬರಗಾಲಕ್ಕೆ ತತ್ತರಿಸಿ ಸಂಕಷ್ಟದಲ್ಲಿ ಬದುಕಿದ್ದಾನೆ. ಇದೆಲ್ಲವನ್ನು ಸರ್ಕಾರ ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಪ್ರತಿಭಟನಾಕಾರರ ಬೇಡಿಕೆಗಳನ್ನು ಸರ್ಕಾರ ವಾಸ್ತವಿಕವಾಗಿ ಅರಿಯದೆ ಅಸಡ್ಡೆ ತೋರಿಸುತ್ತಿದ್ದೆ. ಜಿಲ್ಲೆಯ ಪ್ರತಿಯೊಂದು ಇಲಾಖೆಯಲ್ಲಿ ಲಂಚ ತಾಂಡವವಾಡುತ್ತಿದೆ. ಜಿಲ್ಲಾಧಿಕಾರಿಯವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸತತವಾಗಿ ಭೀಕರ ಬರಗಾಲಕ್ಕೆ ನೊಂದು ಬೆಂದಿರುವ ರೈತನಿಗೆ ಇನ್ನಾದರೂ ಸರ್ಕಾರ ಎಚ್ಚೆತ್ತು ರೈತನ ನೆರವಿಗೆ ನಿಲ್ಲಬೇಕು ಎಂದರು.
ರಮೇಶ ಹುಳಕಣ್ಣವರ, ಬಿ.ಎಸ್. ಸಸಿಮಠ, ಪುರಸಭೆ ಸದಸ್ಯ ಮೋಹನ ದೇಸಾಯಿ, ಸುರೇಶ ಮಾಳೆಕೊಪ್ಪ, ಪರಶುರಾಮ ಕರಡಿಕೊಳ್ಳ, ಬಸವರಾಜ ಬಿಳಿಮಗ್ಗದ, ಶಿವನಗೌಡ ನಾಡಗೌಡ್ರ, ಮಂಜುನಾಥ ಇಟಗಿ, ಶಿವನಗೌಡ ಗೌಡರ, ಆರ್.ಎಂ. ದೇಸಾಯಿ, ಪ್ರಭು ಅಬ್ಬಿಗೇರಿ, ರೈತ ಮುಖಂಡ ದೇವಪ್ಪ ಕಲಕೇರಿ, ಕೆಂಚನಗೌಡ ಗೌಡ್ರ, ಮಹಾಬಳಶೇಪ್ಪ ಅಳವಂಡಿ, ಯಲ್ಲಪ್ಪ ಬಡಿಗೇರಿ, ದೇವರಾಜ ಕಲಕೇರಿ ಮುಂತಾದವರು ಪಾಲ್ಗೊಂಡಿದ್ದರು.
ಶಾಸಕರ ವಿದೇಶಿ ಪ್ರವಾಸ: ಆಕ್ರೋಶ
ಮುಂಡರಗಿ ಈ ವರ್ಷವೂ ಬರ ಪರಿಸ್ಥಿತಿ ಮುಂದುವರಿದಿದೆ. ಆದರೆ ಇಲ್ಲಿನ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತ್ರ ವಿದೇಶ ಪ್ರವಾಸದ ಮೋಜು ಅನುಭವಿಸುತ್ತಿದ್ದಾರೆ ಎಂದು ಗುರುವಾರ ಪ್ರತಿಭಟನೆಗೆ ಆಗಮಿಸಿದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು. ಸರ್ಕಾರ ಈಗಾಗಲೇ ರಾಜ್ಯದ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಅದರಲ್ಲಿ ಮುಂಡರಗಿ ತಾಲೂಕನ್ನು ಕಡೆಗಣಿಸಲಾಗಿದೆ. ಈ ಬಗ್ಗೆ ಸರ್ಕಾರ ಮೇಲೆ ಒತ್ತಡ ತಂದು, ಮುಂಡರಗಿ ತಾಲೂಕನ್ನು ಸೇರ್ಪಡೆ ಮಾಡಿದಲ್ಲಿ ತಾಲೂಕಿನ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಅಂತಹ ಪ್ರಯತ್ನ ಶಾಸಕರಿಂದ ನಡೆಯುತ್ತಿಲ್ಲ. ಬದಲಾಗಿ ಅಧ್ಯಯನದ ನೆಪದಲ್ಲಿ ವಿದೇಶಕ್ಕೆ ತೆರಳಿದ್ದಾರೆ. ಇನ್ನು ಶಾಸಕರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಲು ಕಾಯುತ್ತ ಕುಳಿತರೆ ಜಿಲ್ಲಾಧಿಕಾರಿಯೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸದ್ಯದಲ್ಲಿಯೇ ಮುಂಡರಗಿ ಪಟ್ಟಣದಲ್ಲಿಯೇ ಅಧಿಕಾರಿಗಳು ಮತ್ತು ಶಾಸಕರ ವರ್ತನೆಯ ವಿರುದ್ಧ ಮತ್ತೊಂದು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ. ಶಾಸಕರು ವಿದೇಶಿ ಪ್ರವಾಸವನ್ನು ಮುಗಿಸಿಕೊಂಡು ಬಂದ ಅನಂತರ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.