ಗ್ಯಾಸ್ ದರ ಏರಿಕೆ: ಆಟೋ ಚಾಲಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜ. 3
ಅಡುಗೆ ಅನಿಲ ಹಾಗೂ ಆಟೋಗಳಿಗೆ ಬಳಸುವ ಅನಿಲ ಸಿಲಿಂಡರ್ ಬೆಲೆ ದಿಢೀರ್ ಏರಿಕೆ ಮಾಡಿರುವುದನ್ನು ವಿರೋಧಿಸಿ ಸ್ಥಳೀಯ ಯಂಗ್ ಇಂಡಿಯಾ ಪರಿವಾರ ಹಾಗೂ ಯಂಗ್ ಇಂಡಿಯಾ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ದರ ಏರಿಕೆ ಕೈಬಿಡುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಏಕಾಏಕಿ ಅಡುಗೆ ಅನಿಲ ಹಾಗೂ ಆಟೋ ಬಳಕೆಯ ಗ್ಯಾಸ್ ಸಿಲಿಂಡರ್ನ ದರದಲ್ಲಿ ಭಾರಿ ಪ್ರಮಾಣದ ಏರಿಕೆಯಿಂದ ಜೀವನೋಪಾಯಕ್ಕಾಗಿ ಆಟೋಗಳನ್ನು ಓಡಿಸುತ್ತಿರುವವರ ಜೀವನ ಕಷ್ಟಕರವಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿ ಕೆಲಸಗಳಿಗೆ ಪ್ರಾಮುಖ್ಯ ನೀಡದೇ ಕೇವಲ ಲಾಭಕ್ಕಾಗಿ ಸರ್ಕಾರ ಆದ್ಯತೆ ನೀಡುತ್ತಿರುವುದು ವಿಷಾದಕರ ಸಂಗತಿಯಾಗಿದೆ.
ಸರ್ಕಾರದ ಈ ಬಡ ಹಾಗೂ ಮಧ್ಯಮ ವರ್ಗದ ಜನವಿರೋಧಿ ನೀತಿಯನ್ನು ಸಂಘಟನೆ ಬಲವಾಗಿ ಖಂಡಿಸುತ್ತದೆ. ಸದ್ಯದ ದರದಲ್ಲೇ ಜನರು ಜೀವನ ನಡೆಸುವುದು ಕಷ್ಟಕರವಾಗಿರುವ ಸಂದರ್ಭದಲ್ಲಿ ಸರ್ಕಾರದ ಇತ್ತೀಚಿನ ಹೊಸದರ ಘೋಷಣೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್ಗೆ ರು. 220 ಹಾಗೂ ಆಟೋ ಗ್ಯಾಸ್ ದರವನ್ನು ಪ್ರತಿ ಕೆಜಿಗೆ ರು. 11.10 ಏರಿಸಿರುವುದು ಈಗಾಗಲೇ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಮರುಪರಿಶೀಲನೆ ಕೈಗೊಂಡು ನಿರ್ಧಾರ ಹಿಂದಕ್ಕೆ ಪಡೆಯುವ ಮೂಲಕ ಸಾಮಾನ್ಯ ಜನರ ಹಿತ ಕಾಯುವ ಕಾರ್ಯಕ್ಕೆ ಪ್ರಾಮುಖ್ಯ ನೀಡಬೇಕಿದೆ. ತಪ್ಪಿದಲ್ಲಿ ಸಂಘಟನೆ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದರು. ಬೆಳಗ್ಗೆ ನಗರದ ಭೂಮರಡ್ಡಿ ವೃತ್ತದ ಪಂ. ಪುಟ್ಟರಾಜ ಕವಿ ಗವಾಯಿಗಳವರ ಪ್ರತಿಮೆ ಬಳಿಯಿಂದ ಪ್ರಾರಂಭಿಸಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು ನೂರಕ್ಕೂ ಅಧಿಕ ಆಟೋಗಳೊಂದಿಗೆ ಚಾಲಕರು ಪಾಲ್ಗೊಂಡು ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ 15 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟಿಸಿ ತಹಸೀಲ್ದಾರ್ಗೆ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ಮಲ್ಲೇಶ ಮುಂಡರಗಿ, ರಫೀಕ ಜಮಾಲಖಾನ, ಮಂಜುನಾಥ ಅಗಸಿಮನಿ, ಗಂಗಾಧರ ಬ್ಯಾಗೋಟಿ, ಸುರೇಶ ಪನ್ನೂರ, ಈರಣ್ಣ ಗೆಜ್ಜಳ್ಳಿ, ದಾವಲ ದೊಡ್ಡಮನಿ, ಮಹಾದೇವ ಚಲವಾದಿ, ಹೇಮಂತ ಕಾಳೆ, ಶರಣಪ್ಪ ಅಗ್ಗದ, ಗೋಪಾಲ ಗೊರ್ಲೆ, ಹುಲಗೇಳ ಗೆಜ್ಜಳ್ಳಿ, ಗಂಗಾಧರ ಬೆನ್ನಾಳಮಠ, ಕೃಷ್ಣಾ ಕಲ್ಮನಿ, ಅಮರೇಶ ಅಂಗಡಿ, ರಫೀಕ ಮುಳಗುಂದ, ಬಸವರಾಜ ಅಂಗಡಿ, ಶಿವರಾಜ ಹಡಗಲಿ, ನಾಗರಾಜ ಗುಳೇದಗುಡ್ಡ, ಸುರೇಶ ಸೊಳಂಕಿ, ಮಂಜುನಾಥ ಹರ್ಲಾಪೂರ, ರಾಮು ಬಾಗಲಕೋಟೆ ಮುಂತಾದವರು ಪಾಲ್ಗೊಂಡಿದ್ದರು.