ಜಿಎಸ್ಎಸ್ ಕನ್ನಡ ಸಾಹಿತ್ಯದ ರತ್ನ
ಗಜೇಂದ್ರಗಡ: ರಾಷ್ಟ್ರಕವಿ ಜಿ.ಎಸ್.ಎಸ್.ರ ಅಗಲಿಕೆಯಿಂದಾಗಿ ಕನ್ನಡ ಸಾಹಿತ್ಯ ಮುಕುಟದ ರತ್ನವೊಂದು ಕಳಚಿದಂತಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಹೇಳಿದರು. ಅವರು ಈಚೆಗೆ ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ಕಸಾಪ ರೋಣ ತಾಲೂಕು ಘಟಕ ಹಾಗೂ ಚಿಗುರು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನುಡಿನಮನ ಮತ್ತು ಗಜೇಂದ್ರಗಡ ಹೋಬಳಿ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಎಸ್. ಶಿವರುದ್ರಪ್ಪನವರು ಪ್ರಾಧ್ಯಾಪಕ ವೃತ್ತಿಯ ಮೂಲಕ ಸಾಹಿತ್ಯ ರಚನೆಕಾರರಾಗಿ ಜತೆಗೆ ನಾಡಿನ ಜ್ವಲಂತ ಸಮಸ್ಯೆಗಳಿಗೆ ತಮ್ಮ ನೇರ ನಡೆ ಮೂಲಕ ಅಪಾರ ಸೇವೆ ಸಲ್ಲಿಸಿ ಯುವ ಬರಹಗಾರರಿಗೆ ಮಾದರಿಯಾಗಿದ್ದಾರೆ. ಈ ದಿಸೆಯಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಶತಮಾನೋತ್ಸವದ ಸನೀಹದಲ್ಲಿದೆ. ಈ ನಿಟ್ಟಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿಚಾರ ಧಾರೆಗಳು ಪ್ರತಿಯೊಬ್ಬ ಕನ್ನಡಿಗರ ಮನೆ-ಮನ ತಲುಪಿಸುವ ಕಾಯಕ ಮಾಡಬೇಕಿದೆ. ರಾಜ್ಯದಲ್ಲಿ ಅತ್ಯಂತ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಜಿಲ್ಲಾ ಕಸಾಪ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಯುವ ಚುಟುಕು ಕಲಾವಿದ ಎಂ.ಎಸ್. ಮಕಾನದಾರ ವಿಶೇಷ ಉಪನ್ಯಾಸ ನೀಡಿದರು. ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿದರು. ಯು.ಯು. ಗೊಡೇಕಾರ, ಉಮಾ ನಾವಡೆ, ಜಿ.ಎಸ್.ಎಸ್. ರಚಿಸಿದ ಭಾವಗೀತೆಯನ್ನು ಹಾಡುವ ಮೂಲಕ ಅಗಲಿದ ಮಹಾನ್ ಚೇತನರಿಗೆ ನುಡಿ ನಮನ ಸಲ್ಲಿಸಿದರು. ಕಸಾಪ ತಾಲೂಕಾಧ್ಯಕ್ಷ ಡಾ. ಶಿವರಾಜ ಗುರಿಕಾರ, ಶರಣು ಗೋಗೇರಿ, ಶರಣಪ್ಪ ರೇವಡಿ, ಮಹಾಂತೇಶ ಸೋಮನಕಟ್ಟಿ, ಪ್ರಾ. ಬಸವರಾಜ ಚಿನಿವಾಲರ, ನಾಗರಾಜ ಬುಟ್ಟಾ, ಬಿ.ವಿ. ಮುನವಳ್ಳಿ, ಡಿ.ಎಸ್. ಗಾಳಿ, ಬಿ.ಬಿ. ಸೂಡಿ, ಹುಚ್ಚಪ್ಪ ಹಾವೇರಿ, ವಸಂತ ಗಾರಗಿ, ಸಿ.ಜಿ. ಹುಡೇದಗಡ್ಡಿ, ಆರ್.ಕೆ. ಭಾಗವಾನ ಮುಂತಾದವರು ಉಪಸ್ಥಿತರಿದ್ದರು.
--
ಕವಿ ಜಿಎಸ್ಎಸ್ಗೆ ನುಡಿನಮನ
ನರೇಗಲ್ಲ: ನಾಡಿಗೆ ಬೆಳಕಿನ ಕಿರಣಗಳನ್ನು ಚೆಲ್ಲಿದ ಕವಿ ಜಿಎಸ್ಎಸ್ ನಮ್ಮೆಲ್ಲರ ನಡುವೆ ಹಣತೆಯ ಜ್ಯೋತಿಯಂತೆ ದಾರಿ ದೀಪವಾಗಿದ್ದಾರೆ ಎಂದು ಎಸ್.ಎ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಸಿ.ಜಿ. ಹುಡೇದಗಡ್ಡಿ ಹೇಳಿದರು. ಅವರು ಬುಧವಾರ ಸಂಜೆ ಸ್ಥಳೀಯ ಅನ್ನದಾನ ವಸತಿ ನಿಲಯದಲ್ಲಿ ನಡೆದ ಹೊಸ ವರ್ಷ ದಿನಾಚರಣೆ ಹಾಗೂ ಜಿ.ಎಸ್. ಶಿವರುದ್ರಪ್ಪನವರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿರು. ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ನಿಲಯ ಪಾಲಕರು ಅಗಲಿದ ನಾಡಿನ ಗಣ್ಯಾತಿಗಣ್ಯರ ಆತ್ಮ ಶಾಂತಿಗಾಗಿ ಒಂದು ನಿಮಿಷ ಮೌನಾಚರಣೆಯ ನಂತರ ಹಣತೆ ಹಚ್ಚುವ ಮೂಲಕ 2014ನೇ ಹೊಸವರ್ಷವನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗದವರು ಪಾಲ್ಗೊಂಡಿದ್ದರು.