ಶ್ರೀರಾಮುಲು ಶೀಘ್ರ ಬಿಜೆಪಿಗೆ
ಕನ್ನಡಪ್ರಭ ವಾರ್ತೆ, ಗದಗ, ಜ. 3
ಮಾಜಿ ಸಚಿವ, ಬಿಎಸ್ಆರ್ ಸಂಸ್ಥಾಪಕ ಬಿ. ಶ್ರೀರಾಮುಲು ಶೀಘ್ರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಶುಕ್ರವಾರ ಮುಂಬರುವ ಲೋಕಸಭಾ ಚುನಾವಣೆ ಕುರಿತು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆಗಾಗಿ ನಗರಕ್ಕೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಎಸ್ವೈ ಹಾಗೂ ಶ್ರೀರಾಮುಲು ಅವರನ್ನು ಮರಳಿ ಬಿಜೆಪಿಗೆ ಕರೆ ತರುವ ನಿಟ್ಟಿನಲ್ಲಿ ರಾಜ್ಯ ನಾಯಕರು ನಿರ್ಧರಿಸಿ, ಪಕ್ಷದ ವರಿಷ್ಠರಿಗೆ ತಿಳಿಸಲಾಗಿತ್ತು. ಈಗಾಗಲೇ ಬಿಎಸ್ವೈ ಕುರಿತು ನಿರ್ಧಾರ ತೆಗೆದುಕೊಂಡಿರುವ ವರಿಷ್ಠರು ಶೀಘ್ರದಲ್ಲಿಯೇ ಶ್ರೀರಾಮುಲು ಅವರ ಸೇರ್ಪಡೆ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಕೇಂದ್ರ ನಾಯಕರ ಅನುಮೋದನೆಗಾಗಿ ಕಾಯುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಹಲವಾರು ಕಾರಣಗಳಿಂದ ಪಕ್ಷ ತೊರೆದ ನಾಯಕರು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ಗುರಿಯೊಂದಿಗೆ ಮತ್ತೆ ಮಾತೃ ಪಕ್ಷಕ್ಕೆ ಆಗಮಿಸಿದ್ದು, ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತಿದೆ.
ಸರ್ವ ನಾಯಕರ ಸಹಕಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಮೂಲಕ ಪಕ್ಷ ನರೇಂದ್ರ ಮೋದಿ ಕೈ ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ವೈಫಲ್ಯ: 6 ತಿಂಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೇವಲ ಗೊಂದಲದ ಯೋಜನೆಗಳ ಘೋಷಣೆ ಮಾತ್ರ ಮಾಡುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಮತ್ತು ಯಾವುದೇ ಹೊಸ ಯೋಜನೆ ಪ್ರಾರಂಭವಾಗದೇ ಜನಸಾಮಾನ್ಯರಲ್ಲಿ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಭಾವನೆ ಮೂಡಿಸಿದೆ. ಸಿದ್ದರಾಮಯ್ಯ ಸರ್ಕಾರ ಇನ್ನೂ ಟೆಕಾಫ್ ಆಗಿಲ್ಲ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಇಂಧನ ಸೇರಿದಂತೆ ಅಡುಗೆ ಅನಿಲ ದರಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಜನಸಾಮಾನ್ಯರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನ ವೈಫಲ್ಯ, ದುರಾಡಳಿತ ಬಿಜೆಪಿಗೆ ಲೋಕಸಭಾ ಚುನಾವಣೆಯ ಗೆಲುವಿಗೆ ಪ್ರಮುಖ ಅಸ್ತ್ರವಾಗಲಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಪ್ರಮುಖ ನಾಯಕರಾದ ಜಗದೀಶ ಶೆಟ್ಟರ್, ಅನಂತಕುಮಾರ, ಆರ್. ಅಶೋಕ, ಡಿ.ವಿ. ಸದಾನಂದಗೌಡ ಸೇರಿದಂತೆ ಹಲವಾರು ನಾಯಕರು ಇಂದಿನಿಂದ ರಾಜ್ಯಪ್ರವಾಸ ಕೈಗೊಂಡಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಚುನಾವಣೆಗೆ ಸನ್ನದ್ಧಗೊಳಿಸುವ ಕಾರ್ಯ ಪ್ರಾರಂಭಿಸಲಾಗಿದೆ.
ಕಾಂಗ್ರೆಸ್ ಕಳಂಕಿತರನ್ನು ಕ್ಯಾಬಿನೇಟ್ಗೆ ಸೇರ್ಪಡೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಜನವರಿ 6ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಇನ್ನು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಜನವರಿ 8ರಂದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಕಾಂತಿಲಾಲ ಬನ್ಸಾಲಿ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ಎಂ.ಎಸ್. ದೊಡ್ಡಗೌಡ್ರ, ಬೀರಪ್ಪ ಬಂಡಿ, ಅರವಿಂದ ಹುಲ್ಲೂರ, ಶ್ರೀನಿವಾಸ ಹುಬ್ಬಳ್ಳಿ, ಅರುಣ ಅಣ್ಣಿಗೇರಿ, ಜಯಶ್ರೀ ಉಗಲಾಟದ, ಅಶ್ವಿನಿ ಜಗತಾಪ, ಕಮಲಾಕ್ಷಿ ಗೊಂದಿ, ವಂದನಾ ವರ್ಣೇಕರ, ಸರೋಜಾ ಶಿರಿ, ಶಾರದಾ ಸಜ್ಜನರ ಮತ್ತಿತರರಿದ್ದರು.