ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸ್ಥಾನ: ಕೃಷ್ಣವೇಣಿ
ಗದಗ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆ ಪುರುಷನಷ್ಟೇ ಗೌರವ ಸ್ಥಾನ ಹೊಂದಿದ್ದಾಳೆ ಎಂದು ಗದಗ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ ಅಭಿಪ್ರಾಯಪಟ್ಟರು.
ಅವರು ಈಚೆಗೆ ನಗರದ ಮದ್ಲಿ ಓಣಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೆಡ್ಸ್ಟಾರ್ ಕ್ಲಬ್ನ 9ನೇ ವಾರ್ಷಿಕೋತ್ಸವ ಹಾಗೂ ಮಹಿಳಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಮುನ್ನಡೆ ಸಾಧಿಸುತ್ತಿರುವದು ಸ್ವಾಗತಾರ್ಹ ಸಂಗತಿ. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮ ಮೋಜು ಮಸ್ತಿ ಮಾಡದೇ ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಮಹಿಳೆಯರನ್ನು ಜಾಗೃತಿಗೊಳಿಸುವ ರೀತಿಯಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸುವ ಮೂಲಕ ರೆಡ್ಸ್ಟಾರ್ ಕ್ಲಬ್ ತನ್ನ 9ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದು ಕ್ಲಬ್ನ ಸಾಂಸ್ಕೃತಿಕ ಪ್ರಜ್ಞೆಯನ್ನು ಮತ್ತು ಸಾಮಾಜಿಕ ಕಾಳಜಿ ಬಿಂಬಿಸುತ್ತದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಗೀತಾಂಜಲಿ ಮೆಣಸಿನಕಾಯಿ ಮಾತನಾಡಿ, ಮಹಿಳೆಯರಿಂದ ಮಹಿಳೆಯರಿಗಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಮಹಿಳೆಯರನ್ನು ಒಂದುಗೂಡಿಸುವ ಹಾಗೂ ಅವರಲ್ಲಿ ಜಾಗೃತಿ ಉಂಟು ಮಾಡುವ ಅಪರೂಪದ ಕಾರ್ಯಕ್ರಮವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಸದಸ್ಯೆ ಪಾರ್ವತಿ ಪತ್ತಾರ ಮಾತನಾಡಿದರು. ಮಹಿಳಾ ಕವಿಗೋಷ್ಠಿಯಲ್ಲಿ ಬಿ.ಎನ್.
ತಾರಾ, ಜಯಶ್ರೀ ಶ್ರೀಗಿರಿ, ಭಾಗ್ಯಲಕ್ಷ್ಮೀ ಘಳಗಿ, ಶೋಭಾ ಶಲವಡಿ ಅವರು ತಮ್ಮ ಸ್ವರಚಿತ ಕವನ ವಾಚಿಸಿದರು.
ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸೀಮಾ, ಜಯಶ್ರೀ ಕುಂದಗೋಳ, ರೆಡ್ಸ್ಟಾರ್ ಕ್ಲಬ್ನ ಗೌರವಾಧ್ಯಕ್ಷ ದೀಪಕ ರೇವಣಕರ, ಅಧ್ಯಕ್ಷ ಬಸವರಾಜ ಪತ್ತಾರ, ಕಾರ್ಯದರ್ಶಿ ಮಹ್ಮದಶಫಿ ನಾಗರಕಟ್ಟಿ ಸೇರಿದಂತೆ ಮಂಜುಶ್ರೀ ಮಹಿಳಾ ಸ್ವಸಹಾಯ ಗುಂಪಿನ ಸರ್ವ ಸದಸ್ಯರು, ಗುರುಹಿರಿಯರು, ಯುವಕರು ಪಾಲ್ಗೊಂಡಿದ್ದರು. ಕವಿತಾ ಬಾಳಿಹಳ್ಳಿಮಠ ಪ್ರಾರ್ಥಿಸಿದರು. ದೀಕ್ಷಾ ರೇವಣಕರ ಸ್ವಾಗತಿಸಿದರು. ಸುಮಾ ಪತ್ತಾರ ಹಾಗೂ ಮಂಜುಳಾ ಮಂಡಲಗೇರಿ ನಿರೂಪಿಸಿದರು. ಸೌಮ್ಯಾ ಮಂಡಲಗೇರಿ ವಂದಿಸಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಗದಗ: ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಹಮ್ಮಿಕೊಂಡ ವಿಶೇಷ ಶಿಬಿರದ ಅಂಗವಾಗಿ ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಎನ್.ಎಸ್.ಎಸ್. ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಗದಗನ ಎಸ್.ಎಂ. ಕೃಷ್ಣ ನಗರ ಆಶ್ರಯ ಕಾಲೋನಿಯಲ್ಲಿ ಈಚೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯೆ ಡಾ. ಕಮಲಾಕ್ಷಿ ಅಂಗಡಿ ಮತ್ತು ಡಾ. ಕುಮಾರ.ಸಿ. ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಾದ ರಾಜು ಮತ್ತು ಅಕ್ಕಮ್ಮ ಇವರು ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಗಳನ್ನು ವಿತರಿಸಿದರು.
ಸಿದ್ಧಾರೂಢ ಮಠಕ್ಕೆ ರು. 2.5 ಲಕ್ಷ ದೇಣಿಗೆ ಸಲ್ಲಿಕೆ
ರೋಣ: ಪಟ್ಟಣದ ಸಿದ್ಧಾರೂಢ ಮಠದಲ್ಲಿ ಬೀದರನ ಚಿದಂಬರಾಶ್ರಮದ ಶಿವಕುಮಾರ ಶ್ರೀಗಳಿಗೆ ಈಚೆಗೆ ಜರುಗಿದ ತುಲಾಭಾರ ಕಾರ್ಯಕ್ರಮದಲ್ಲಿ ಪಟ್ಟಣದ ಸಿದ್ಧಾರೂಢ ಮಹಿಳಾ ಮಂಡಳದ ಪದಾಧಿಕಾರಿಗಳು ಸಂಗ್ರಹಿಸಿದ ರು. 2 ಲಕ್ಷ 50 ಸಾವಿರ ದೇಣಿಗೆ ಚೆಕ್ನ್ನು ಶ್ರೀಗಳಿಗೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧಾರೂಢ ಮಹಿಳಾ ಮಂಡಳದ ಅಧ್ಯಕ್ಷೆ ಅನ್ನಪೂರ್ಣಾ ಪಾಟೀಲ ಮಾತನಾಡಿ, ಸಿದ್ಧಾರೂಢ ಶ್ರೀಗಳು ಜನ್ಮ ತಾಳಿದ ಪುಣ್ಯ ಭೂಮಿಯಾದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಮಠದ ನಿರ್ಮಾಣಕ್ಕೆ ಪಟ್ಟಣದ ಮಹಿಳಾ ಮಂಡಳದ ಸರ್ವ ಸದಸ್ಯರು ರು. 2.5 ಲಕ್ಷ ದೇಣಿಗೆಯನ್ನು ಸಂಗ್ರಹಿಸಿದ್ದು, ಅದನ್ನು ಶ್ರೀಗಳಿಗೆ ಅರ್ಪಿಸಿದ್ದೇವೆ. ದೇಣಿಗೆ ಸಂಗ್ರಹದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ಅಭಿನಂದನೆ ಎಂದರು. ಬೀದರನ ಸಿದ್ಧಾರೂಢ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಪಟ್ಟಣದ ಸಿದ್ಧಾರೂಡ ಮಹಿಳಾ ಮಂಡಳದ ಮಹಿಳಾ ಸದಸ್ಯರು ಶ್ರೀಮಠದ ಅಭಿವೃದ್ಧಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದು ಶ್ಲಾಘನೀಯ ಎಂದರು. ಬೀದರ ಸಿದ್ಧಾರೂಢಮಠದ ಶಿವಕುಮಾರ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ದೇವರು ವಹಿಸಿದ್ದರು. ಶಂಕ್ರಪ್ಪ ಅಂದಾನಪ್ಪ ಗಡಗಿ ಸೇರಿದಂತೆ ಸಿದ್ಧಾರೂಢ ಮಹಿಳಾ ಮಂಡಳದ ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಲ್ಲಮ್ಮ ಗಡಗಿ ಸ್ವಾಗತಿಸಿದರು. ಎಸ್.ವಿ. ಬಿಲ್ದಂಡಗಿಮಠ ನಿರೂಪಿಸಿದರು. ರೇಷ್ಮಾ ದೇಸಾಯಿ ವಂದಿಸಿದರು.