ಸಮುದಾಯ ಭವನ ದುರ್ಬಳಕೆ: ಕ್ರಮಕೈಗೊಳ್ಳಿ
ಗಜೇಂದ್ರಗಡ: ಸಮೀಪದ ಕಲ್ಲಿಗನೂರ ಗ್ರಾಮದಲ್ಲಿ ಸರ್ಕಾರದ ಅನುದಾನದಿಂದ ನಿರ್ಮಿಸಿರುವ ಸಮುದಾಯ ಭವನ ಸಾರ್ವಜನಿಕ ಬಳಕಗೆ ಬದಲಾಗಿ ವ್ಯಕ್ತಿಯೊಬ್ಬರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.
ಗ್ರಾಮದಿಂದ ನಾಗೇಂದ್ರಗಡಕ್ಕೆ ಸಂಚರಿಸುವ ರಸ್ತೆ ಬಲಕ್ಕೆ 10 ವರ್ಷದ ಹಿಂದೆ ನಿರ್ಮಿಸಲಾದ ಸಮುದಾಯ ಭವನದ ಕೀಲಿಕೈ ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿರದೇ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿದೆ. ಸಮುದಾಯ ಭವನದ ಒಳಗಡೆ ಅವರು ಒಕ್ಕಲುತನಕ್ಕೆ ಬಳಸುವ ಕೃಷಿ ಸಲಕರಣೆ ಇಟ್ಟಿದ್ದಾರೆ. ಹೊರ ಆವರಣ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಮದಲ್ಲಿ ಸಾರ್ವಜನಿಕ ಸಭೆ, ಸಮಾರಂಭ ನಡೆಸಲು ಅನುಕೂಲವಾಯಿತೆಂದು ಗ್ರಾಮಸ್ಥರು ಭಾವಿಸಿದ್ದರು. ಆದರೆ, ಭವನವನ್ನು ವ್ಯಕ್ತಿಯೊಬ್ಬರು ಹಲವಾರು ವರ್ಷದಿಂದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗೆಗೆ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು. ಇನ್ನಾದರೂ ಎಚ್ಚೆತ್ತು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ವ್ಯಕ್ತಿಯೊಬ್ಬರ ಮುಷ್ಠಿಯಲ್ಲಿರುವ ಸಾರ್ವಜನಿಕ ಸಮುದಾಯ ಭವನಕ್ಕೆ ಮುಕ್ತಿ ನೀಡಲು ಮುಂದಾಗಬೇಕಾಗಿದೆ.