ರೈತರಿಗೆ ಖಾಲಿ ಚೀಲದಲ್ಲೂ ಅನ್ಯಾಯ
ಹಿಂಗಾರು ಹಂಗಾಮಿನಲ್ಲಿ ಅಲ್ಪ ಸ್ವಲ್ಪ ಸುರಿದು ಮಳೆಯಿಂದ ಹಾಗೂ ನೀರಾವರಿ ಜಮೀನುಗಳಲ್ಲಿ ರೈತರು ಗೋವಿನ ಜೋಳವನ್ನು ಬಿತ್ತನೆ ಮಾಡಿದ್ದರು. ಮಾರುಕಟ್ಟೆದಲ್ಲಿ ದರ ಕುಸಿತವಾದ ಹಿನ್ನೆಲೆಯಲ್ಲಿ ಸರ್ಕಾರ ತಾಲೂಕಿನ ಕೊಣ್ಣೂರ ಮತ್ತು ಶಿರೋಳ ಗ್ರಾಮದಲ್ಲಿ ಗೋವಿನಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಿ, ಪ್ರತಿ ಕ್ವಿಂಟಾಲ್ಗೆ ರು. 1310 ರಂತೆ ಖರೀದಿಸುತ್ತಿದೆ. ಆದರೆ, ಖರೀದಿಸಿದ ಗೋವಿನಜೋಳದ ಚೀಲಗಳಿಗೆ ಮಾತ್ರ ಅದೇಕೆ ಇಷ್ಟೊಂದು ಕಡಿಮೆ ಹಣ ನಿಗದಿ ಮಾಡಿದ್ದಾರೆ ಎನ್ನುವುದು ಮಾತ್ರ ತಿಳಿಯದಂತಾಗಿದೆ. ಚೀಲದ ವಿಷಯದಲ್ಲೂ ರೈತರು ನಷ್ಟ ಅನುಭವಿಸುತ್ತಿರುವುದು ದುರದೃಷ್ಟಕರ.
ಇಳುವರಿಯೂ ಕಡಿಮೆ: ಪ್ರಸಕ್ತ ಸಾಲಿನಲ್ಲಿ ಮಳೆ ತಡವಾಗಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಗೋವಿನಜೋಳದ ಬಿತ್ತನೆಯೂ ತಡವಾಗಿ ಆಗಿತ್ತು. ಇದರಿಂದಾಗಿ ಇಳುವರಿಯಲ್ಲಿ ಸಾಕಷ್ಟು ಕುಸಿತವಾಗಿದ್ದು, ಪ್ರತಿ ಎಕರೆಗೆ ಕೇವಲ 15 ರಿಂದ 20 ಕ್ವಿಂಟಾಲ್ ಮಾತ್ರ ಇಳುವರಿ ಬಂದಿದೆ. ಬಂದಿರುವ ಅಲ್ಪ ಇಳುವರಿಯಲ್ಲಿಯೇ ಹೆಚ್ಚಿನ ಲಾಭ ಪಡೆಯಬೇಕು ಎಂದು ಖರೀದಿ ಕೇಂದ್ರಕ್ಕೆ ಬಂದರೆ ಇಲ್ಲಿ ತೂಕ ಹಾಗೂ ಖಾಲಿ ಚೀಲದಲ್ಲಿಯೂ ನಷ್ಟವನ್ನು ಅನುಭವಿಸುವಂತಹ ಸ್ಥಿತಿ ತಾಲೂಕಿನ ರೈತರಿಗೆ ಎದುರಾಗಿದೆ.
ಒಟ್ಟು ಖರೀದಿ: ತಾಲೂಕಿನಲ್ಲಿ ಸದ್ಯ ಬೆಂಬಲ ಬೆಲೆ ಯೋಜನೆಡಿಯಲ್ಲಿ ಗೋವಿನಜೋಳವನ್ನು ಖರೀದಿಸುತ್ತಿರುವ ಶಿರೋಳ ಕೇಂದ್ರದಲ್ಲಿ 865 ಕ್ವಿಂಟಾಲ್ ಹಾಗೂ ಕೊಣ್ಣೂರ ಕೇಂದ್ರದಲ್ಲಿ 550 ಕ್ವಿಂಟಾಲ್ ಖರೀದಿಸಲಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಖರೀದಿ ಮಾಡಿದ್ದು, ಪ್ರತಿ ಕ್ವಿಂಟಾಲ್ಗೆ ರೈತರಿಗೆ ಖಾಲಿ ಚೀಲದಲ್ಲಿಯೇ ರು. 30 ನಷ್ಟವಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಕೇಂದ್ರದಲ್ಲಿ ಇನ್ನೂ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿರುವುದರಿಂದ ಇನ್ನಷ್ಟು ರೈತರಿಗೆ ನಷ್ಟವಾಗುವ ಸಾಧ್ಯತೆ ನಿಚ್ಚಳವಾಗಿದೆ. ಆದ್ದರಿಂದ ಸಂಬಂಧಪಟ್ಟವರು ರೈತರಿಗಾಗುತ್ತಿರುವ ನಷ್ಟ ತಪ್ಪಿಸಲು ಮುಂದಾಗಬೇಕಿದೆ.