ರೈಲು ಸಂಚಾರ ವಿಸ್ತರಣೆ: ಚೇಂಬರ್ ಸ್ವಾಗತ
ಗದಗ: ಈ ಮೊದಲು ಹುಬ್ಬಳ್ಳಿ-ಬಿಜಾಪುರ ವಿಶೇಷ ಪ್ಯಾಸೆಂಜರ್ ರೇಲ್ವೆ ನಂ. 06919, 06920 ಬೆಳಗ್ಗೆ 8 ಗಂಟೆಗೆ ಗದಗದಿಂದ ಸಂಚರಿಸುತ್ತಿದ್ದು, ಈ ರೈಲನ್ನು 31-12-2013ರ ವರೆಗೆ ಮಾತ್ರ ಇದ್ದು, ಅದನ್ನು ಮುಂದುವರಿಸುವಂತೆ ನಮ್ಮ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಮನವಿ ನೀಡಿ ಒತ್ತಾಯಿಸಲಾಗಿತ್ತು. ನಮ್ಮ ಬೇಡಿಕೆಗೆ ಸ್ಪಂದಿಸಿ ಜ. 1ರಿಂದ ಜೂನ್ 30ರ ವರೆಗೆ 6 ತಿಂಗಳವರೆಗೆ ವಿಸ್ತರಿಸಿದ್ದಕ್ಕೆ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಹಾಗೂ ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರ್ಮನ್ ಜಿ.ಕೆ. ಆದಪ್ಪಗೌಡ್ರ ಅವರು ಜನರಲ್ ಮ್ಯಾನೇಜರ್ ಮತ್ತು ಚೀಪ್ ಅಪರೇಟಿಂಗ್ ಮ್ಯಾನೇಜರ್ ನೈಋತ್ಯ ರೇಲ್ವೆ ವಲಯ ಇವರಿಗೆ ಅಭಿನಂದಿಸಿದ್ದಾರೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗೆಯಿಂದ ಮನಸ್ಸಿನ ದುಗುಡ ದೂರ
ಲಕ್ಷ್ಮೇಶ್ವರ: ಸಮೀಪದ ಹುಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹೊಸ ವರ್ಷದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಹಾಸ್ಯಪ್ರಜ್ಞೆ ಬೆಳೆಸುವ ಉದ್ದೇಶದಿಂದ ನಗೆಹಬ್ಬ ಕಾರ್ಯಕ್ರಮ ಜರುಗಿತು. ಹಾಸ್ಯ ಕಲಾವಿದ ಆರ್.ಆರ್. ರಜಪೂತ ಅವರು ತಮ್ಮಲ್ಲಿನ ಹಾಸ್ಯ ಚಟುವಟಿಕೆಗಳ ಪ್ರತಿಭೆ ಮೂಲಕ ಮಕ್ಕಳನ್ನು ನಗೆಗಡಲಲ್ಲಿ ತೆಲಿಸಿ ಮನರಂಜನೆ ನೀಡಿದರು. ಈ ಸಂದರ್ಭ ಮುಖ್ಯೋಪಾಧ್ಯಾಯ ಎಚ್.ಬಿ. ರಡ್ಡೇರ ಮಾತನಾಡಿ, ಮಕ್ಕಳಿಗೆ ಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವಲ್ಲಿ ಪಠ್ಯೇತರ ಚಟುಚಟಿಕೆಗಳಾದ ಆಟೋಟಗಳು, ಆರೋಗ್ಯಕರ ಹಾಗೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂಥ ಮನರಂಜನಾ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸುತ್ತವೆ ಎಂದರು. ಬಸಪ್ಪ ಗಾಣಿಗೇರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಿ.ಬಿ. ಅಯ್ಯಮ್ಮನವರ, ಸಹ ಶಿಕ್ಷಕರು ಹಾಜರಿದ್ದರು. ಸಿಆರ್ಪಿ ಎನ್.ಬಿ. ಅತಡಕರ ಸ್ವಾಗತಿಸಿದರು. ಶಿಕ್ಷಕ ವಿ.ಡಿ. ಮಡ್ಲಿ ನಿರೂಪಿಸಿ, ವಂದಿಸಿದರು.