ಎಚ್ಕೆ ಭೇಟಿ ರಾಜಕೀಯ ಚರ್ಚೆಗೆ ಅಲ್ಲ: ಹಿರೇಮಠ
ಗದಗ: ನಾನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರನ್ನು ಭೇಟಿ ಮಾಡಲು ಬಂದಿದ್ದು ಯಾವುದೇ ರಾಜಕೀಯ ಚರ್ಚೆಗೆ ಅಲ್ಲ. ಬಳ್ಳಾರಿ ಸಮೀಪದ ಸಂಡೂರು ಕಾರ್ಖಾನೆಯೊಂದರ ತ್ಯಾಜ್ಯವು ಹಲವು ರೈತರ ಜಮೀನಿಗೆ ಹರಿದು ತೊಂದರೆಯಾಗುತ್ತಿದ್ದು, ಈ ಕುರಿತು ಸಚಿವರೊಂದಿಗೆ ಚರ್ಚಿಸಲು ಬಂದಿದ್ದೇನೆ ಎಂದು ಸಮಾಜ ಸಮುದಾಯ ಪರಿವರ್ತನಾ ಸಂಸ್ಥಾಪಕ ಎಸ್.ಆರ್. ಹಿರೇಮಠ ಹೇಳಿದರು. ಅವರು ಭಾನುವಾರ ನಗರದ ಕಾಟನ್ಸೇಲ್ ಸೊಸೈಟಿಯ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಎಚ್.ಕೆ. ಪಾಟೀಲರು ಉತ್ತಮ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಬಳ್ಳಾರಿಯ ರೈತರ ವಿಷಯವಾಗಿ ಅವರ ಜತೆಗೆ ಚರ್ಚಿಸಲು ಅಲ್ಲಿನ ರೈತ ಮುಖಂಡರ ಜತೆಗೆ ಆಗಮಿಸಿದ್ದೇನೆ ಹೊರತು, ಇದಕ್ಕೆ ಯಾವುದೇ ಬಣ್ಣ ಬಳಿಯುವುದು ಬೇಡ ಎಂದರು.
ಇಂದು ಡಿಕೆಶಿ ವಿರುದ್ಧ ದಾಖಲೆ ಬಿಡುಗಡೆ: ಸಚಿವ ಡಿ.ಕೆ. ಶಿವಕುಮಾರ ಅವರ ವಿರುದ್ಧ ದಾಖಲೆ ಬಿಡುಗಡೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್. ಹಿರೇಮಠ, ಈ ವಿಷಯದ ಕುರಿತು ಈ ಸೊಸೈಟಿಯ ಆವರಣದಲ್ಲಿ ಚರ್ಚಿಸಲು ತಾವು ಸಿದ್ಧರಿಲ್ಲ. ಸಚಿವ ಡಿ.ಕೆ. ಶಿವಕುಮಾರ ಅವರ ವಿರುದ್ಧ ದಾಖಲೆ ಬಿಡುಗಡೆಗೆ ಸಂಬಂಧಿಸಿದಂತೆ ಸೋಮವಾರ ಹುಬ್ಬಳ್ಳಿಯಲ್ಲಿ ದಾಖಲೆ ಬಿಡುಗಡೆಗೊಳಿಸುತ್ತೇನೆ ಎಂದರು.
ಸಂಡೂರು ರೈತರೊಂದಿಗೆ ಚರ್ಚೆ: ಎಸ್.ಆರ್. ಹಿರೇಮಠ ಅವರೊಂದಿಗೆ ನಡೆಸಿದ ಸಭೆಯ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿಯ ಸಂಡೂರಿನಲ್ಲಿ ಎನ್.ಎಂ.ಡಿ.ಸಿ. ಗಣಿಗಾರಿಕೆಯ ತ್ಯಾಜ್ಯವಸ್ತು ರೈತರ ಜಮೀನುಗಳಲ್ಲಿ ಹರಿದು ಹೊಲಗಳಲ್ಲಿ ಹಾನಿ ಉಂಟಾಗಿದೆ. ಹಾನಿಗೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡುವ ಕುರಿತಂತೆ ಎಸ್.ಆರ್. ಹಿರೇಮಠ ಹಾಗೂ ಸಂಡೂರಿನ ರೈತರೊಂದಿಗೆ ನಗರದ ಕಾಟನ್ಸೇಲ್ ಸೊಸೈಟಿಯಲ್ಲಿ ಚರ್ಚಿಸಲಾಗಿದೆ. ಸಚಿವ ಸಂಪುಟದ ಸಹೋದ್ಯೋಗಿಗಳ ಕುರಿತಾಗಲಿ ಅಥವಾ ಮತ್ಯಾವ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿಲ್ಲ. ಈ ಕುರಿತು ಯಾವುದೇ ಕಪೋಲಕಲ್ಪಿತ ವರದಿ ಬೇಡ ಎಂದರು.
ಸೈಕಲ್ ವಿತರಣೆ
ಗಜೇಂದ್ರಗಡ: ಸರ್ಕಾರಿ ಬಾಲಕಿಯರ ಮಾದರಿ ಶಾಲೆಯಲ್ಲಿ ಈಚೆಗೆ 8ನೇ ತರಗತಿ ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡುವ ಉಚಿತ ಸೈಕಲ್ನ್ನು ಎಸ್ಡಿಎಂಸಿ ಆಡಳಿತ ಮಂಡಳಿಯವರು ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯಗುರುಮಾತೆ ಕೆ.ಡಿ. ಭಜಂತ್ರಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಚಿಕಿತ್ಸೆಯಿಂದ ಮಧುಮೇಹ ವಾಸಿ: ಬಸವರಾಜ ಬೊಮ್ಮಾಯಿ
ಶಿಗ್ಗಾಂವಿ: ಮಧುಮೇಹ ರೋಗವಲ್ಲ. ಅದಕ್ಕೆ ಮನಸ್ಸಿನ ಗಟ್ಟಿತನದ ಅವಶ್ಯವಿದೆ. ರೋಗಕ್ಕೆ ತಕ್ಕಂತೆ ವೈದ್ಯರಿಂದ ಸಲಹೆ ಪಡೆದು ಸೂಕ್ತ ಚಿಕಿತ್ಸಾ ವಿಧಾನ ಅನುಸರಿಸಿದಾಗ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪಟ್ಟಣದ ಆಶ್ರಯ ಕಾಲನಿಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಜರುಗಿದ ತಾಲೂಕು ಮಟ್ಟದ ಮಧುಮೇಹ ತಪಾಸಣೆ, ಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣದ ಮಹತ್ತರ ಉದ್ದೇಶದಿಂದ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆಯುರ್ವೇದ ಪದ್ಧತಿ ನಿಧಾನವಾದರೂ, ಸಂಪೂರ್ಣ ಗುಣಮುಖಗೊಳಿಸುತ್ತದೆ. ಈ ದಿಶೆಯಲ್ಲಿ ಪ್ರಾರಂಭವಾಗಿರುವ ಆಯುಷ್ ಆಸ್ಪತ್ರೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಐದು ವರ್ಷದಲ್ಲಿ ಹೃದಯ ಕಾಯಿಲೆಗೆ ಸಂಬಂಧಪಟ್ಟ 300ಕ್ಕೂ ಹೆಚ್ಚು ರೋಗಿಗಳಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅದರಲ್ಲಿ ಶೇ. 99ರಷ್ಟು ಜನ ಆರೋಗ್ಯವಂತರಾಗಿ ದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ಖ್ಯಾತ ಹೃದಯ ತಜ್ಞರಿಂದ ಶಿಗ್ಗಾಂವಿ ಪಟ್ಟಣದಲ್ಲಿ ಹೃದಯ ಕಾಯಿಲೆಗೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದರು. ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು. ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಬಿ.ಟಿ. ಇನಾಮಮತಿ, ಸಿ.ಎಸ್. ಪಾಟೀಲ, ಸರೋಜವ್ವ ಆಡಿನ, ಶಶಿಧರ ಹೊನ್ನಣ್ಣವರ, ತಾಪಂ ಸದಸ್ಯೆ ಫರೀದಾ ಭಾನು ಶೇಖಸನದಿ, ಪುರಸಭಾ ಸದಸ್ಯೆ ಲಕ್ಷ್ಮೀ ಕಟ್ಟಿಮನಿ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಇದ್ದರು. ಆಯುರ್ವೇದ ಆಡಳಿತ ವೈದ್ಯಾಧಿಕಾರಿ ಡಾ. ಜಿ.ಸಿ. ನಿಡಗುಂದಿ ನಿರೂಪಿಸಿದರು.