ಗ್ರಾಮೀಣ ಕ್ರೀಡೆಗಳು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿ: ಪಾಟೀಲ
ಗಜೇಂದ್ರಗಡ: ಸಾಂಪ್ರದಾಯಕ ಹಾಗೂ ಜನಪದ ಸೊಗಡಿನ ಗ್ರಾಮೀಣ ಕ್ರೀಡೆಗಳು ಆರೋಗ್ಯ ಸದೃಢಗೊಳಿಸುವ ಜತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಹಾವೇರಿ ಲೋಕಸಭಾ ಮತಕ್ಷೇತ್ರ ಉಪಾಧ್ಯಕ್ಷ ಮಿಥುನ್ ಪಾಟೀಲ ಅಭಿಪ್ರಾಯಪಟ್ಟರು.
ಅವರು ಗುರುವಾರ ಸಮೀಪದ ಮಾಟರಂಗಿ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವ ಹಾಗೂ ಹೊಸ ವರ್ಷದ ಅಂಗವಾಗಿ ಜರುಗಿದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ದಣಿದ ಜೀವಕ್ಕೆ ಕೊಂಚ ನೆಮ್ಮದಿ ವಿಶ್ರಾಂತಿ ಜತೆ ಸಮಾಜದಲ್ಲಿ ಉತ್ತಮ ಬಾಂಧವ್ಯ ನಿರಂತರವಾಗಿರಲೆಂಬ ಸದುದ್ದೇಶದಿಂದ ಹಿರಿಯರು ನಡೆಸಿಕೊಂಡು ಬಂದಿರುವ ಕಬಡ್ಡಿಯಂತಹ ಹಲವಾರು ಕ್ರೀಡೆಗಳು ಮನುಷ್ಯ ಸಂಬಂಧ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಪರಂಪರಾಗತವಾಗಿ ನಡೆದು ಬಂದ ಸಂಪ್ರದಾಯವನ್ನು ಮುನ್ನಡೆಸಿದಾಗ ಹಿರಿಯರ ಆಚರಣೆ ಸಾರ್ಥಕಗೊಳ್ಳುತ್ತವೆ ಎಂದರು.
ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಗೊಗೇರಿ ಗ್ರಾಪಂ ಅಧ್ಯಕ್ಷ ಹನಮಂತ ಕಮ್ಮಾರ ಕ್ರೀಡೆಯ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ವಕ್ಕಲರ, ಮುರ್ತುಜಾ ಡಾಲಾಯತ್, ಹಸನ ತಟಗಾರ, ರವಿ ಗಡೇದವರ, ಮೌನೇಶ ಭೋಸಲೆ, ಅಲ್ತಾಫ ಕರಮುಡಿ, ಗುರು ಕಲ್ಲೋಡ್ಡರ, ಹುಸೇನಸಾಬ ಬಾಗವಾನ, ಚಂದ್ರಶೇಖರ ಬೋಸಲೆ, ನೀಲಪ್ಪ ಗುರಿಕಾರ, ಹನುಮಪ್ಪ ಮಾದರ, ಸಂಗಪ್ಪ ಗುರಿಕಾರ ಮುಂತಾದವರು ಉಪಸ್ಥಿತರಿದ್ದರು.