ದಿ. ಕಮಲಮ್ಮ ಬಣ್ಣದವರ ಬದುಕು ಮಾದರಿ
ಗದಗ: ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ ನಗರಸಭೆ ಮಾಜಿ ಸದಸ್ಯೆ ದಿ. ಕಮಲಮ್ಮ ಬಣ್ಣದವರ ಬದುಕು ಮಹಿಳೆಯರಿಗೆ ಮಾರ್ಗದರ್ಶಕವಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು. ಅವರು ಈಚೆಗೆ ಬೆಟಗೇರಿಯ ಕಮಲಮ್ಮ ಬೆನಕಪ್ಪ ಬಣ್ಣದ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಹಾಗೂ ಕಲಾಭಿವೃದ್ಧಿ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ರಕ್ತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಮಲಮ್ಮ ಬಣ್ಣದ ಅವರು ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡಾಪಾಗಿಟ್ಟರು. ದಿ. ಬಿ.ಬಿ. ಬಣ್ಣದ ಅವರು ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಲು ಅವರ ಪತ್ನಿ ಕಮಲಮ್ಮನವರ ಪಾತ್ರ ಪ್ರಮುಖವಾಗಿದೆ. ಅವರ 5ನೇ ಪುಣ್ಯತಿಥಿ ನಿಮಿತ್ತ ಅವರ ಮಗ ಅಶೋಕ ಬಣ್ಣದ ಅವರು ಶಾಲಾ ಮಕ್ಕಳಿಗೆ ಉಚಿತ ರಕ್ತ ಗುಂಪಿನ ತಪಾಸಣೆ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ. ಅದೇ ರೀತಿ ಮಹಾವೀರ ಗೋ ಶಾಲೆಯ 150 ಗೋವುಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದು ಇತರರಿಗೆ ಮಾದರಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಶೋಕ ಬಣ್ಣದ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಹೊಲಿಗೆ ತರಬೇತಿ, ಕಸೂತಿ ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರು ಸ್ವಾವಲಂಬಿಗಳಾಗಲು ಪ್ರಯತ್ನಿಸುತ್ತೇವೆ ಎಂದರು. ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಪ್ರೇಮಾ ಕಣವಿ, ವಿರೂಪಾಕ್ಷಪ್ಪ ಐಲಿ, ಸಿ.ಆರ್.ಪಿ. ಮಡಿವಾಳ ಮುಂತಾದವರು ಹಾಜರಿದ್ದರು. ನಾಗರಾಜ ಮಾಳೋದೆ ಸ್ವಾಗತಿಸಿದರು. ಸಿ.ಎಸ್. ರಾಠೋಡ ನಿರೂಪಿಸಿದರು.