ಬಿಎಸ್‌ವೈ ಪಕ್ಷಾಂತರ ನಡೆ ಖಂಡನೀಯ: ದೇಸಾಯಿ
ಗದಗ: ಇಷ್ಟು ದಿನ ಬಿಜೆಪಿ ಹಳಿಯುತ್ತ ರಾಜ್ಯಾದ್ಯಂತ ತಿರುಗಾಡಿ ತಾವು ಮರಳಿ ಬಿಜೆಪಿಗೆ ಹೋಗುವುದು ಅಸಾಧ್ಯ, ಕೆಜೆಪಿ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡುವೆ ಎಂದೆಲ್ಲ ಬೊಗಳೆ ಬಿಟ್ಟಿದ್ದ ಮಾಜಿ ಸಿಎಂ ಯಡಿಯೂರಪ್ಪ ಇದೀಗ ಬಿಜೆಪಿ ಪಕ್ಷ ಸೇರ್ಪಡೆಯಾಗಿರುವುದು ಅವರನ್ನು ನಂಬಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಹಾಗೂ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಅಭ್ಯರ್ಥಿಗಳನ್ನು, ಆರಿಸಿ ತಂದ ಜನತೆಗೆ ಮಾಡಿದ ನಂಬಿಕೆ ದ್ರೋಹವಾಗಿದೆ ಎಂದು ರಾಣಿ ಚನ್ನಮ್ಮ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಧಿಕಾರ ಪಡೆಯಲು ಇವರಿಗೆ ಪಕ್ಷದಲ್ಲಿ ಕಾರ್ಯಕರ್ತರು ಬೇಕು ಅದು ಸಿಗದಿದ್ದರೆ ಒಮ್ಮಲೆ ಪಕ್ಷ ಬಿಟ್ಟು ತಮ್ಮ ಸ್ವಾರ್ಥ ಸಾಧನೆಗಾಗಿ ಬೇರೊಂದು ಪಕ್ಷ ಸೇರಿಬಿಡುವ ಇಂಥ ನಾಯಕರ ಜಾಯಮಾನ ನೋಡಿದರೆ ಪಕ್ಷದ ಜೀವಾಳವಾದ ಕಾರ್ಯಕರ್ತರಿಗೆ ಬೆಲೆಯೇ ಇಲ್ಲ, ರಾಜಕೀಯ ನಾಯಕರಿಗೆ ತಮ್ಮ ಅಧಿಕಾರ ಸ್ವಾರ್ಥ ಸಾಧನೆಯೇ ಮುಖ್ಯ ಎಂಬುದು ಗೊತ್ತಾಗುತ್ತದೆ. ಯಡಿಯೂರಪ್ಪ ತಾವು ಬಿಜೆಪಿ ಪಕ್ಷ ಸೇರುವ ನಿರ್ಧಾರವನ್ನೂ ಒಮ್ಮುಖವಾಗಿ ತೆಗೆದುಕೊಂಡಿದ್ದಾರೆ. ಅವರಿಗೆ ಕಾರ್ಯಕರ್ತರ ಮೇಲೆ ಗೌರವ ಇಲ್ಲ. ಸ್ವತಃ ಕೆಜೆಪಿ ಪಕ್ಷದ ಇಬ್ಬರು ಶಾಸಕರು ಯಡಿಯೂರಪ್ಪ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ತಾವು ಬಿಜೆಪಿ ಸೇರುವುದಿಲ್ಲ. ಅದಕ್ಕೂ ಮೊದಲು ಕಾರ್ಯಕರ್ತರ ಅನುಮತಿ ಪಡೆಯಬೇಕಾಗುತ್ತದೆ. ನಂಬಿ ಆರಿಸಿ ತಂದ ಕ್ಷೇತ್ರದ ಜನರ ಮಾತು ಕೇಳಬೇಕಾಗುತ್ತದೆ ಎಂದಿರುವುದು ಅಭಿನಂದನೀಯ ನಡೆಯಾಗಿದೆ. ಕಾರ್ಯಕರ್ತರು ಬೇಡ, ಜನರು ಬೇಡ ತಾವು ನಡೆದಿದ್ದೇ ದಾರಿ ಎಂದುಕೊಂಡು ಅಹಂಭಾವದಿಂದ ನಡೆದಿರುವ ಯಡಿಯೂರಪ್ಪ ಅವರಿಗೆ ಬುದ್ದಿ ಕಲಿಸಲು ರಾಜ್ಯದ ಜನತೆ ಪಣ ತೊಡಬೇಕೆಂದು ಎಂ.ಬಿ.ದೇಸಾಯಿ ಮನವಿ ಮಾಡಿದ್ದಾರೆ.
ಕೊರೆಗಾಂವ ವಿಜಯೋತ್ಸವ
ಗದಗ: ಡಾ. ಬಿ.ಆರ್. ಅಂಬೇಡ್ಕರ್ ಕೊಳಚೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊರೆಗಾಂವ ವಿಜಯೋತ್ಸವ ಅಂಗವಾಗಿ ಈಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಸಂಘದ ಅಧ್ಯಕ್ಷ ಧರ್ಮಣ್ಣ ಹೊಸಮನಿ ಮಾಲಾರ್ಪಣೆ ಮಾಡಿದರು. ಸಂಘದ ಅಧ್ಯಕ್ಷ ಧರ್ಮಣ್ಣ ಹೊಸಮನಿ ಮಾತನಾಡಿ, ಕ್ರಿ.ಶ. 1817ರ ಡಿಸೆಂಬರ್ 31ರಂದು ಮಹಾರಾಷ್ಟ್ರದ ಕೊರೆಗಾಂವ ಪ್ರದೇಶದಲ್ಲಿ ಸ್ವಾಭಿಮಾನಿ ದಲಿತ ಯುವಕ ಸಿದ್ಧನಾಯಕ ಎಂಬುವವನು 2ನೇ ಬಾಜಿರಾಯನ ವಿರುದ್ಧ ಹೋರಾಡಿ ಪೇಶ್ವೆಯವರ ದುರಾಡಳಿತವನ್ನು ಅಂತ್ಯ ಮಾಡಲು ಪ್ರಯತ್ನಿಸಿ ಗೆಲುವು ಸಾಧಿಸಿದ ದ್ಯೋತಕವಾಗಿ ಜ. 1ರಂದು ಪ್ರತಿ ವರ್ಷ ಕೊರೆಗಾಂವ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು. ಶಿವಾಜಿ ಪವಾರ, ಸುರೇಶ ಸೋಳಂಕಿ, ಲಕ್ಷ್ಮಣ ಕಟ್ಟಿಮನಿ, ಬುಡ್ಡಾ ಕರ್ನಾಚಿ, ಬಾಷಾ ಕುಂದಗೋಳ, ರಾಜಾ ಕಪೇದಾರ, ಸಂಗಪ್ಪ ಹೊಂಬಳ, ಶೇಖಪ್ಪ ಅರಳಿಕಟ್ಟಿಮಠ, ಬಸವರಾಜ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.