ಯುವಕರು ಸಂಘಟಿತರಾಗಿ
ಕನ್ನಡಪ್ರಭ ವಾರ್ತೆ, ನರಗುಂದ, ಜ. 5
ರಾಜ್ಯದಲ್ಲಿ ಪಂಚಮಸಾಲಿ ಸಮಾಜದವರು ಬಹುಸಂಖ್ಯಾತರಾಗಿದ್ದು, ಈ ಸಮಾಜ ಇಲ್ಲಿ ವರೆಗೂ ಸಂಘಟಿತರಾಗಿರದೇ ಇರುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಹಾಗಾಗಿ, ಸಮಾಜದ ಯುವಕರು ಒಂದಾಗಿ ಸಮಾಜ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಈಚೆಗೆ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಹೊಸ ವರ್ಷ 2014ರ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿಯೊಂದು ಸಮಾಜದ ಜನತೆ ಸಂಘಟಿತರಾದರೆ ಆ ಸಮಾಜ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ನಾವು ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದು, ಮೇಲಾಗಿ ನಮ್ಮ ಜನಾಂಗ ಹೆಚ್ಚು ಕೃಷಿ ಅವಲಂಬಿಸಿದೆ.
ಹೀಗಾಗಿ, ಆರ್ಥಿಕವಾಗಿ ಸ್ವಲ್ಪ ಹಿಂದೆ ಉಳಿದಿದ್ದೇವೆ. ಮುಂದಿನ ದಿನದಲ್ಲಿ ಸಮಾಜದ ಯುವಕರು ಒಂದಾಗಿ ಸಮಾಜವನ್ನು ಸಂಘಟನೆ ಮಾಡಿ ಸಮಾಜಕ್ಕೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಪಡೆಯಲು ಮುಂದಾಗಬೇಕು ಎಂದರು.
ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಕ್ಷೇತ್ರಗಳಲ್ಲಿ ನಾವು ಜಾಗೃತರಾಗಿ ಮುಂದೆ ನಡೆದರೆ ನಾವೂ ಕೂಡ ಮುಂದವರಿದ ಜನಾಂಗವಾಗಲು ಸಾಧ್ಯ. ಇನ್ನು ಗ್ರಾಮೀಣ ಭಾಗದಲ್ಲಿ ಜನಾಂಗದ ಬಡ ವಿದ್ಯಾರ್ಥಿಗಳು ಕಡಿಮೆ ಶಿಕ್ಷಣ ಪಡೆದುಕೊಳ್ಳವ ಸ್ಥಿತಿ ಇದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರರಿಗೆ ಉತ್ತಮ ಶಿಕ್ಷಣ ಒದಗಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನ ಭಾವಚಿತ್ರ ಹೊಂದಿರುವ 2014ರ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು.
ಟಿಎಪಿಎಂಸಿ ಅಧ್ಯಕ್ಷ ಎಫ್.ಆರ್. ಪಾಟೀಲ, ಮಹೇಶ ಪಾಟೀಲ, ಶಶಿಧರ ದಿಂಡೂರ, ವಿ.ಎಲ್. ಪಾಟೀಲ, ಶಿವಪ್ಪ ಬೋಳಶಟ್ಟಿ, ಚನ್ನಬಸಪ್ಪ ಕಂಠಿ, ಬಸವರಾಜ ಪಾಟೀಲ, ಎಲ್.ಎಂ. ಪಾಟೀಲ, ಡಾ. ರಾಚನಗೌಡ್ರ ಮುಂತಾದವರು ಉಪಸ್ಥಿತರಿದ್ದರು.