ವಿಪತ್ತು ತಡೆಗೆ ಉತ್ತರದಾಯಿತ್ವ ಪಾಲಿಸಿ
ಕನ್ನಡಪ್ರಭ ವಾರ್ತೆ, ಗದಗ, ಜ. 5
ವಿಪತ್ತು ತಡೆಗಟ್ಟಲು ಸರ್ವರೂ ಸದಾಸಿದ್ಧರಿದ್ದು, ರಾಷ್ಟ್ರೀಯ ಉತ್ತರದಾಯಿತ್ವ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಕರೆ ನೀಡಿದರು.
ಅವರು ಭಾನುವಾರ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಗದಗ ಇವುಗಳ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ವಿಪತ್ತು ನಿರ್ವಹಣೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುವ ಅಗ್ನಿಶಾಮಕದಳ, ಅಂಬ್ಯುಲೆನ್ಸ್, ಪೊಲೀಸ್ ಇಲಾಖೆ ಅಲ್ಲದೇ ಸಾಮಾಜಿಕ ಸಂಘ ಸಂಸ್ಥೆಗಳು ಸದಾ ಸಿದ್ಧತೆಯಲ್ಲಿರಬೇಕು. ಆ ಮೂಲಕ ಜನತೆಗೆ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿಯ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ವಿಪತ್ತು ಸಂಭವಿಸಿದ ಸ್ಥಳಕ್ಕೆ ತೆರಳಲು ಅಲ್ಲಿನ ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿರಬೇಕು. ಅಂದಾಗ ಮಾತ್ರ ವಿಪತ್ತನ್ನು ಸರಿಯಾದ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವುದು. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಸುಧಾರಿಸುವುದು ಅವಶ್ಯವಾಗಿದ್ದು, ಅದನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು ಎಂದರು.
ಜಿಲ್ಲಾ ಸಮಾದೇಷ್ಟರ ಸುದೀರಸಿಂಹ ಘೋರ್ಪಡೆ ಸ್ವಾಗತಿಸಿದರು. ಅಗ್ನಿ ಶಾಮಕದಳದ ಅಧಿಕಾರಿ ಎಸ್.ವಿ. ನಾಯ್ಕರ್, ಎಸ್.ಎಫ್. ದೊಡ್ಡಮನಿ, ವಿ.ವಿ. ವಸ್ತ್ರದ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನದ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ನಳಿನಿ ಗೌಡರ, ನೇತ್ರಾವತಿ ಕಣವಿ, ಅಚ್ಯತ್ ಕರೇಗೌಡರ, ವನಿತಾ ಕಾಟಗೆ, ಪೂಜಾ ಗುಡಿಸಾಗರ, ಫಾರೂಕ ನದಾಫ ಅವರಿಗೆ ಜಿಲ್ಲಾಧಿಕಾರಿಗಳು ಬಹುಮಾನ ವಿತರಿಸಿದರು. ನಂತರ ನಗರದ ಕೆ.ಎಚ್. ಪಾಟೀಲ ಸಭಾಭವನದ ಆವರಣದಲ್ಲಿ ವಿಪತ್ತು ಉಂಟಾದಾಗ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳು ಹಾಗೂ ಪಾರಾಗಬೇಕಾದ ಉಪಾಯಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಸುರೇಶ ಹಳ್ಳಿಕೇರಿ ನಿರೂಪಿಸಿದರು. ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಿಂದ ಪ್ರಾರಂಭವಾದ ರ್ಯಾಲಿಯು ನಗರದ ಗಾಂಧಿವೃತ್ತ, ಭೂಮರಡ್ಡಿ ವೃತ್ತ, ವೆಂಕಟೇಶ್ವರ ಚಿತ್ರಮಂದಿರ ಮಾರ್ಗವಾಗಿ ಎಪಿಎಂಸಿ ಯಾರ್ಡ್‌ನ ಸ್ವಾಮಿವಿವೇಕಾನಂದ ಸಭಾಭವನಕ್ಕೆ ಆಗಮಿಸಿ ಮುಕ್ತಾಯಗೊಳಿಸಲಾಯಿತು.