13ರಿಂದ 658ನೇ ಮದ್ಯವರ್ಜನ ಶಿಬಿರ
ಹಾನಗಲ್ಲ: ರಾಜ್ಯದಲ್ಲಿ 657 ಮದ್ಯ ವರ್ಜನ ಶಿಬಿರ ಏರ್ಪಡಿಸಿ, 40 ಸಾವಿರ ಮದ್ಯ ವ್ಯಸನಿಗಳಿಗೆ ಹೊಸ ಬದುಕು ತೋರಿಸಿಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 658ನೇ ಮದ್ಯವರ್ಜನ ಶಿಬಿರವನ್ನು ಪಟ್ಟಣದಲ್ಲಿ ಜ. 13ರಿಂದ 20ರ ವರೆಗೆ ಆಯೋಜಿಸಿದೆ ಎಂಜು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಯೋಜನಾಧಿಕಾರಿ ಕೆ. ಸದಾನಂದ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ನಗರದ ಅಂಬೇಡ್ಕರ್ ಭವನದಲ್ಲಿ ಜ. 13ರಿಂದ 7 ದಿನಗಳ ಕಾಲ ನಡೆಯುವ ಈ ಶಿಬಿರವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಹಾನಗಲ್ಲ, ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಡೆಸಲಾಗುತ್ತಿದೆ. 70 ಮದ್ಯವ್ಯಸನಿ ಶಿಬಿರಾರ್ಥಿಗಳಿಗೆ ಅವಕಾಶವಿದೆ. ಆಸಕ್ತರು ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ಭಾಗವಹಿಸಬಹುದಾಗಿದೆ. ಶಿಬಿರದಲ್ಲಿ ಪ್ರತಿನಿತ್ಯ ವ್ಯಾಯಾಮ, ಶ್ರಮದಾನ, ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ, ಕೌಟುಂಬಿಕ ಸಲಹೆ, ಸಾಂಸ್ಕೃತಿಕ ಚಟುವಟಿಕೆ, ಶಾರೀರಿಕ ಗುಂಪು ಚಟುವಟಿಕೆ, ವೈಯಕ್ತಿಕ ಸಲಹೆ, ಭಜನೆ ಸೇರಿದಂತೆ ಉಟೋಪಚಾರಗಳ ವ್ಯವಸ್ಥೆ ಮಾಡಲಾಗಿದೆ. ಶಿಬಿರಾರ್ಥಿಗಳು ಏಳು ದಿನ ಪೂರ್ಣ ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಹಾಗೂ 70 ವರ್ಷದ ಒಳಗಿನ ವಯೋವುತಿಯವರಿಗೆ ಮಾತ್ರ ಶಿಬಿರದಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ರಾಜ್ಯದ 22 ಜಿಲ್ಲೆಗಳಲ್ಲಿ 12 ವರ್ಷಗಳಿಂದ ಶಿಬಿರಗಳನ್ನು ನಡೆಸಿ 40,400 ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ. ಹಾನಗಲ್ಲಿನಲ್ಲಿ ಇದೇ ಮೊದಲ ಬಾರಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ ಶಶಿಕಲಾ, ಡಾ ಸತೀಶ ವೈದ್ಯಕೀಯ ತಪಾಸಣೆ ನಡೆಸುವರು. ಶಿಬಿರದಲ್ಲಿ ಮಾರುತಿ ಶಿಡ್ಲಾಪುರ, ಬಿ.ವೈ. ಬಂಡಿವಡ್ಡರ, ಡಾ ಈಶ್ವರ ಮಾಳೋದೆ, ವಿಜಯಕಾಂತ ಪಾಟೀಲ, ವಿಷ್ಣು ಪಟಗಾರ, ಹನುಮಗೌಡ ಪಾಟೀಲ, ಅಶೋಕ ಕೊಂಡ್ಲಿ, ಡಾ ಪ್ರಕಾಶ ಹೊಳೇರ, ಯಮುನಾ ಕೋನೆಸರ, ವಿ. ಮಮತಾ, ಡಾ ಸಿ. ಕೊಟ್ರೇಶ, ಭಾರತಿ ದೊಡ್ಡಮನಿ, ಪ್ರಸನ್ನ ಕುಮಾರ, ಇಂದುಮತಿ ಜೋಷಿ, ಸಾವಿತ್ರಿ ಹೆಗಡೆ, ಬಿ.ಆರ್. ಶೆಟ್ಟರ, ಗುಂಪು ಸಲಹೆ ಹಾಗೂ ಕೌಟುಂಬಿಕ ಸಲಹೆ ನೀಡುವರು. ವಿವೇಕ ಜಾಗೃತ ಬಳಗ, ನರಸಿಂಹ ಕೋಮಾರ, ವಿಶ್ವನಾಥ ಹಿರೇಮಠ ಅವರಿಂದ ಸಂಗೀತ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಕಾರ್ಯದರ್ಶಿ ಧನಂಜಯ, ಕೋಶಾಧಿಕಾರಿ ಕೆ.ಎಲ್. ದೇಶಪಾಂಡೆ, ಅಶೋಕ ಕಲಾಲ, ಪ್ರಶಾಂತ ಮುಚ್ಚಂಡಿ, ರಾಜು ನಂದಿ, ರಾಮು ಯಳ್ಳೂರ, ಶಿವರಾಂ ಶೆಟ್ಟಿ ಇದ್ದರು.