ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅವ್ಯವಸ್ಥೆ ಆಗರವಾದ ಮಕ್ಕಳ ಉದ್ಯಾನ

Lingaraj Badiger
Updated On : 8 Jan 2014, 1:09 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 7
ಪಟ್ಟಣದ ಜನತೆಯ ಕನಸಿನ ಕೂಸಾಗಿದ್ದ ಮಕ್ಕಳ ಉದ್ಯಾನವನ ನಿರ್ಮಿಸುವ ಮೂಲಕ ಪುರಸಭಾ ಆಡಳಿತ ನನಸು ಮಾಡಿದೆ. ಆದರೆ ಉದ್ಯಾನವನ ನಿರ್ವಹಣೆಯಲ್ಲಿ ಎಡವಿದ್ದು, ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ಮಕ್ಕಳ ಉದ್ಯಾನ ನಿರ್ವಹಣೆಗಾಗಿ ಪುರಸಭೆ ವತಿಯಿಂದ ಪ್ರತಿ ತಿಂಗಳು ರು. 85 ಸಾವಿರ ಖರ್ಚು ಮಾಡಲಾಗುತ್ತಿದೆ. ಆದರೆ ಉದ್ಯಾನವನದಲ್ಲಿ ಬಾಯಿ ತೆರೆದ ನೀರಿನ ಟ್ಯಾಂಕ್, ಅರ್ಧಂಬರ್ಧ ಕಾಂಪೌಂಡ್ ನಿರ್ಮಿಸಿರುವುದು ಹಾಗೂ ಮಕ್ಕಳ ಆಟೋಟಕ್ಕೆ ನಿರ್ಮಿಸಿರುವ ಉಪಕರಣಗಳನ್ನು ಮಹಿಳೆಯರು ಉಪಯೋಗಿಸುತ್ತಿರುವುದು ಉದ್ಯಾನವನ ನಿರ್ವಹಣೆ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಎಲ್ಲ ಸೌಲಭ್ಯ: ಉದ್ಯಾನವನದಲ್ಲಿ ಗ್ರಾನೈಟ್ ಕಾರಂಜಿ ಮತ್ತು ಗ್ರಾನೈಟ್ ಕಲ್ಲಿನಲ್ಲೆ ವಿಶ್ರಾಂತಿಗಾಗಿ ಆಸನಗಳನ್ನು ನಿರ್ಮಿಸಲಾಗಿದೆ. ಉದ್ಯಾನವನ ಇನ್ನೂ ಸುಂದರವಾಗಿ ಕಾಣಲು ಹುಲ್ಲಿನ ಹಾಸಿಗೆಯನ್ನು ನಿರ್ಮಿಸಲಾಗಿದೆ. ಮಕ್ಕಳ ಆಟೋಟಕ್ಕೆ ಜೋಕಾಲಿ, ಜಾರುವ ಬಂಡಿ, ತಿರುಗುವ ಜೋಕಾಲಿ, ಲಗೋರಿ ಸೇರಿದಂತೆ ಹಲವು ಸಲಕರಣೆಗಳನ್ನು ಒದಗಿಸಲಾಗಿದೆ.
ಜನರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿವಿಧ ಮನೋರಂಜನೆಗಳನ್ನು ನೀಡುವ ವಿದ್ಯುತ್ ದೀಪ ಅಳವಡಿಸಲಾಗಿದೆ. 20ಕ್ಕೂ ಹೆಚ್ಚು ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದೆ. ಇಂತಹ ವಾತಾವರಣದಲ್ಲಿ ಸಾರ್ವಜನಿಕರು ನಿರಾತಂಕವಾಗಿ ವಿಶ್ರಾಂತಿ ತೆಗೆದುಕೊಳ್ಳಬಹುದು. ಆದರೆ ಎಲ್ಲವೂ ಸೂಕ್ತ ನಿರ್ವಹಣೆ ಇಲ್ಲದೆ ಬಳಲುತ್ತಿವೆ.
ಅಪಾಯಕ್ಕೆ ಆಹ್ವಾನ: ಹಸಿರು ಹುಲ್ಲಿನ ಪರಿಸರ ಜನರನ್ನು ಕೈಬಿಸಿ ಕರೆಯುತ್ತಿದೆ. ಆದರೆ ಉದ್ಯಾನವನ ಭವನದ ಎದುರಿಗೆ ನಿರ್ಮಿಸಿರುವ ನೀರು ಶೇಖರಣೆ ಟ್ಯಾಂಕ್ ಮಾತ್ರ ಅಪಾಯ ಆಹ್ವಾನಿಸುತ್ತಿದೆ. ಇದರಿಂದ ಉದ್ಯಾನವನಕ್ಕೆ ತೆರಳುವ ಮಕ್ಕಳು ಮತ್ತು ಪಾಲಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಕ್ಕಳ ಆಟಕ್ಕಿಲ್ಲ ಅವಕಾಶ: ಉದ್ಯಾನವನದಲ್ಲಿನ ಆಟೋಟ ಸಾಮಗ್ರಿಗಳನ್ನು ಮಕ್ಕಳ ಬದಲು ದೊಡ್ಡವರು ಬಳಸುತ್ತಿದ್ದಾರೆ. ಇನ್ನೂ ಕೆಲ ಪುಂಡರು ಮಕ್ಕಳ ಆಟಕ್ಕೆ ಅವಕಾಶ ನೀಡದೆ ತಾವೇ ಆಟಕ್ಕೆ ಮುಂದಾಗುತ್ತಾರೆ. ಇದು ಮಕ್ಕಳ ಮನಸ್ಸಿಗೆ ನೋವುಂಟು ಮಾಡಿದೆ.
ಮೂಲೆ ಸೇರಿದ ಮನವಿ: ಪಟ್ಟಣದ ಪೂಜಾ ಸ್ಥಳಗಳ ಜತೆ ಮಕ್ಕಳಿಗೆ, ಮಹಿಳೆಯರಿಗೆ, ವೃದ್ಧರ ವಿಶ್ರಾಂತಿಗಾಗಿ ಒಟ್ಟು 21 ಉದ್ಯಾನವನಗಳಿವೆ ಎಂದು ಪುರಸಭೆ ದಾಖಲಾತಿಗಳು ಹೇಳುತ್ತವೆ. ಆದರೆ ಕೆಲವರು ಅವುಗಳನ್ನು ಕಬಳಿಸಿದ್ದಾರೆ.
ಇನ್ನೂ ಕೆಲವರು ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಅತಿಕ್ರಮಣಕ್ಕೆ ಒಳಗಾದ ಉದ್ಯಾನವನಗಳ ಜಾಗವನ್ನು ಸುಪ್ರೀಂಕೋರ್ಟ್ ಆದೇಶದನ್ವಯ ತೆರವಿಗೆ ಮುಂದಾಗಬೇಕು ಎಂದು ಹಿಂದೆ ಕೆಲ ಸಂಘಟನೆ ಮುಖಂಡರು ಮನವಿ ನೀಡಿದ್ದರು. ಇದರಿಂದ ಕಾರ್ಯ ಪ್ರವೃತ್ತರಾದ ಪುರಸಭೆ ಸಿಬ್ಬಂದಿ ಅತಿಕ್ರಮಣಕ್ಕೆ ಒಳಗಾದ ಉದ್ಯಾನವನಗಳ ಪತ್ತೆ ಹಚ್ಚುವ ಕಾರ್ಯ ನಡೆಸಿ ಬಳಿಕ ಕೈ ಬಿಟ್ಟರು. ಹೀಗಾಗಿ, ಮನವಿ ಮೂಲೆ ಸೇರಿದಂತಾಗಿದೆ.
ಕಾಳಜಿ: ಆಧುನಿಕ ಭರಾಟೆಯ ಒತ್ತಡಕ್ಕೆ ಸಿಲುಕಿರುವ ಜೀವಗಳಿಗೆ ವಾಹನಗಳ ದಟ್ಟಣೆ, ವಾಯು ಮಾಲಿನ್ಯದಂತಹ ಹತ್ತು ಹಲವು ಸಮಸ್ಯೆಗಳಿಂದ ಜೀವ ರಕ್ಷಕವಾದ ಆಮ್ಲಜನಕ ಸಿಗುವುದು ದುಸ್ತರವಾಗಿದೆ.  ಮುಂಬರುವ ದಿನಗಳಲ್ಲಿ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರಲಿದೆ. ಅಂತಹ ಆಮ್ಲಜನಕ ನೀಡುವ ಉದ್ಯಾನವನ ಇದಾಗಿದ್ದು, ಇದರ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement