ನಿರ್ಗತಿಕ ಬಡ ಕುಟುಂಬಕ್ಕೆ ಬೇಕಿದೆ ಆಸರೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 7
ಕಿತ್ತು ತಿನ್ನುವ ಬಡತನ, ನಡುಗುತ್ತಿರುವ ದೇಹ, ಏನೂ ತೋಚದ ಬುದ್ಧಿಮಾಂದ್ಯ ತಾಯಿ, ಒಟ್ಟು ಐದು ಜನ ಮಕ್ಕಳಲ್ಲಿ ಮೂವರು ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥರು. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ದುಃಸ್ಥಿತಿ.
ತಾಲೂಕಿನ ಹೆಬ್ಬಾಳ ಗ್ರಾಮದ 65 ವರ್ಷದ ಮಮ್ಮದಲಿ ಬಳಿಗಾರ ಅವರ ಕುಟುಂಬದ ಕರುಣಾಜನಕ ಸ್ಥಿತಿಯಿದು. ಸರ್ಕಾರ ನೀಡಿದ ಚಿಕ್ಕದಾದ ಆಶ್ರಯ ಮನೆ ಇದೆ. ದುಡಿದು ತಿನ್ನುವ ಛಲ ಇದ್ದರೂ ದೇಹ ಬಲಹೀನವಾಗಿದೆ. ಇಂತಹ ಸ್ಥಿತಿಯಲ್ಲಿಯೇ ಹೊಟ್ಟೆ ತುಂಬಿಕೊಳ್ಳಲು ನಿತ್ಯ ಮನೆಯಲ್ಲಿಯೇ ಗೊಬ್ಬರದ ಖಾಲಿ ಚೀಲ ತಂದು ತಾಡಪತ್ರಿ ಹೊಲೆಯುತ್ತಾನೆ. ಅದರಿಂದ ನಿತ್ಯ ರು. 30 ಕೂಲಿ ಬರುತ್ತಿದ್ದು, ಇದು ಯಾತಕ್ಕೂ ಸಾಲದೇ ಉಪವಾಸ ಮಲಗುವ ಚಿಂತಾಜನಕ ಸ್ಥಿತಿ.
ಮೂವರಿಗೆ ಅಂಗವೈಕಲ್ಯ: ಐದು ಜನ ಮಕ್ಕಳಲ್ಲಿ 21 ವರ್ಷದ ಹಿರಿಯ ಮಗ ಬಾಬಾಜಾನ್ ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ್ದು, ಹಾಸಿಗೆ ಬಿಟ್ಟು ಮೇಲಕ್ಕೆದ್ದಿಲ್ಲ. 19 ವರ್ಷದ ನಜೀರಸಾಬ ಮಾನಸಿಕ ಅಸ್ವಸ್ಥನಾಗಿದ್ದಾನೆ. 13 ವರ್ಷದ ಬಡಿಮಾ ಹಾಗೂ 6 ವರ್ಷದ ಮೌಲಾಲಿಯ ದೇಹಸ್ಥಿತಿಯೂ ನೆಟ್ಟಗಿಲ್ಲ. 10 ವರ್ಷದ ಹುಸೇನಸಾಬಗೆ ಎಲ್ಲ ಮಕ್ಕಳಂತೆ ಶಾಲೆಗೆ ಹೋಗುವ ಇಚ್ಛೆ. ಆದರೆ ಕಿತ್ತು ತಿನ್ನುವ ಬಡತನ ಈತನ ಆಸೆಗೆ ತಣ್ಣೀರೆರಚಿದೆ.
ಸರ್ಕಾರದ ಯೋಜನೆಗಳಿಗೇನೂ ಬಡತನವಿಲ್ಲ. ಪ್ರಾಮಾಣಿಕವಾಗಿ ತಲುಪಿಸುವಲ್ಲಿ ಆಗುತ್ತಿರುವ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಮಗುವಿಗೆ ಶಾಲೆಯಲ್ಲಿ ಅಂಗವಿಕಲತೆಯ ಸೌಲಭ್ಯ ಮಾತ್ರ ದೊರೆತಿಲ್ಲ. 21 ವರ್ಷದ ಬಾಬಾಜಾನ್ ಸ್ಥಿತಿ ನೋಡಲಿಕ್ಕಾಗದು. ಇವನಿಗೆ ಸರ್ಕಾರ ಪ್ರತಿ ತಿಂಗಳು ರು. 400 ಅಂಗವಿಕಲ ವೇತನ ನೀಡುತ್ತಿದ್ದು, ಇದು ಹೆಚ್ಚಾಗಬೇಕಿದೆ.
ಬುದ್ಧಿಮಾಂದ್ಯ ತಾಯಿ: ಇನ್ನು 5 ಜನ ಮಕ್ಕಳ ಸ್ಥಿತಿ ನೋಡಿ ತಾಯಿ ಬಿಬಿಜಾನ್ ಬುದ್ಧಿಮಾಂದೆಯಾಗಿದ್ದಾಳೆ. ಈ ಕುಟುಂಬಕ್ಕೆ ಶಾಪವಾಗಿ ಪರಿಗಣಿಸಿರುವ ಅಂಗವೈಕಲ್ಯತೆ ಎಲ್ಲರ ಜೀವ ಹಿಂಡುತ್ತಿದ್ದೆ. ಹೊಲ ಮತ್ತು ಇತರೆ ಆಸ್ತಿ ಇವರಿಗಿಲ್ಲ. ಸಂಬಂಧಿಗಳು ಆರ್ಥಿಕವಾಗಿ ಸದೃಢರಿಲ್ಲದ ಕಾರಣ ಅವರಿಂದಲೂ ನೆರವು ದೊರೆಯುತ್ತಿಲ್ಲ. ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕೆಂದರೆ ಆರ್ಥಿಕ ತೊಂದರೆ ಕಾಡುತ್ತಿದೆ.
ಮಮ್ಮದಲಿ ಬಳಿಗಾರ ಕುಟುಂಬದ ಸ್ಥಿತಿಯನ್ನು ಕಂಡು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪ್ರತಿ ತಿಂಗಳು ರು. 2,000 ಮಾಸಾಶನ (ಸಹಾಯಧನ) ಮಂಜೂರು ಮಾಡಿದ್ದಾರೆ. ಮಂಗಳವಾರ ಹೆಬ್ಬಾಳ ಗ್ರಾಮದ ಇವರ ಮನೆಗೆ ಭೇಟಿ ನೀಡಿದ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜಯಂತ ಪೂಜಾರ, ತಾಲೂಕು ಯೋಜನಾಧಿಕಾರಿ ದಿವಾಕರ ಕೆ., ಎಚ್.ಸಿ. ಕಿರಣ, ಸ್ಮೃತಿ ಪಾಟೀಲ, ಮಂಜುಳಾ ತೆಗ್ಗಿನಮನಿ, ಬಿಬಿಜಾನ ನದಾಫ್ ಸಹಾಯಧನ ನೀಡಿದರು. ಈ ಮಕ್ಕಳು ಎಲ್ಲರಂತೆ ಬಾಳಲು ಹಾಗೂ ಶಿಕ್ಷಣ ಮುಂದುವರೆಸಲು ದಾನಿಗಳು ಸಹಾಯ ಮಾಡಬೇಕು ಎನ್ನುವುದು ಕುಟುಂಬದವರ ಕೋರಿಕೆಯಾಗಿದೆ. ಸಹಾಯಧನ ನೀಡುವವರು ಬಿಬಿಜಾನ ಮಮ್ಮದಲಿ ಬಳಿಗಾರ, ಹೆಬ್ಬಾಳ ಗ್ರಾಮ ಶಿರಹಟ್ಟಿ ತಾಲೂಕು ಗದಗ ಜಿಲ್ಲೆ, ಬ್ಯಾಂಕ್ ಖಾತೆ ನಂ. 0695119019677 ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹೆಬ್ಬಾಳ, ಈ ಖಾತೆಗೆ ಹಣ ಸಂದಾಯ ಮಾಡಬಹುದು.
- ಮಹದೇವಪ್ಪ ಎಂ. ಸ್ವಾಮಿ