ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪರಿಸರ ಮಾಲಿನ್ಯ ತಡೆಗೆ ಜೈವಿಕ ಇಂಧನ ಅಗತ್ಯ

Lingaraj Badiger
Updated On : 8 Jan 2014, 1:29 am

ಕನ್ನಡಪ್ರಭ ವಾರ್ತೆ, ರೋಣ, ಜ. 7
ಅರಣ್ಯೀಕರಣ ಅಭಿವೃದ್ಧಿ, ಇಂಧನ ಸಮಸ್ಯೆ ನಿವಾರಣೆ, ದೇಶದ ಆರ್ಥಿಕ ಪ್ರಗತಿ ಹಾಗೂ  ಕಚ್ಚಾ ತೈಲಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ತಡೆಯಲು ಜೈವಿಕ ಇಂಧನ ಸಹಕಾರಿ ಎಂದು ಉಪನ್ಯಾಸಕ ಎಫ್.ಎನ್. ಹುಡೇದ ಹೇಳಿದರು.
ಅವರು ಸೋಮವಾರ ಸಂಜೆ ಪಟ್ಟಣದ ಹೊಸ ಸಂತೆ ಬಜಾರ ಜಾಗದಲ್ಲಿ ಹಾಲಕೇರಿ ಲಿಂ. ಅನ್ನದಾನ ಮಹಾಶಿವಯೋಗಿಗಳ 101ನೇ ಸಂವತ್ಸರ ಪುಣ್ಯಾರಾಧನೆ ನಿಮಿತ್ತ 301 ಚಕ್ಕಡಿಗಳ ಮೂಲಕ ಉಳವಿ ಕ್ಷೇತ್ರ ಯಾತ್ರೆ ಅಂಗವಾಗಿ ಸಾವಯವ ಕೃಷಿ ಅಭಿವೃದ್ಧಿ, ಗೋ ಸಂರಕ್ಷಣೆ, ಇಂಧನ ಉಳಿತಾಯ ಹಾಗೂ ಜೈವಿಕ ಇಂಧನ ಬಳಕೆ ಕುರಿತು ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ತಜ್ಞ ಶಶಿಕಾಂತ ಜೋಶಿ ಕಾಗವಾಡ ಮಾತನಾಡಿ, ಅತಿಯಾದ ರಸಾಯನಿಕ ಬಳಕೆಯಿಂದ ಇಂದು ಕೃಷಿಭೂಮಿ ಸತ್ವ ಕಳೆದುಕೊಳ್ಳುತ್ತಿರುವುದರ ಜತೆಗೆ ಬೆಳೆಯುವ ಆಹಾರ ಪದಾರ್ಥಗಳು ವಿಷಪೂರಿತವಾಗುತ್ತಿವೆ. ಆದ್ದರಿಂದ ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಿ ಪೌಷ್ಟಿಕಾಂಶವುಳ್ಳ ಪದಾರ್ಥ ಬೆಳೆಯಲು ಮತ್ತು ಅಧಿಕ ಇಳುವರಿ ಹೊಂದಲು ಸಾವಯವ ಕೃಷಿ ಅತ್ಯಂತ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರೈತರು ಸಾವಯವ ಕೃಷಿಯತ್ತ ಗಮನ ಹರಿಸಬೇಕು. ಸಾವಯವ ಕೃಷಿಯಲ್ಲಿ ಭವಿಷ್ಯವಿದೆ ಎಂಬುದನ್ನು ರೈತರು ಅರಿಯಬೇಕು ಎಂದರು.
ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹಾಲಕೇರಿ ಅಭಿನವ ಅನ್ನದಾನ ಸ್ವಾಮೀಜಿ ಆಶೀರ್ವಚನ ನೀಡಿದರು.
ಒಳಬಳ್ಳಾರಿಯ ಸಿದ್ದಲಿಂಗ ಸ್ವಾಮೀಜಿ, ಖೇಡಗಿಯ ಶಿವಬಸವ ಸ್ವಾಮೀಜಿ, ಕೊತಬಾಳ ಗಂಗಾಧರ ಸ್ವಾಮೀಜಿ, ಕರೆಗುಡ್ಡದ ಮಹಾಂತಲಿಂಗ ಸ್ವಾಮೀಜಿ, ಹಾಲಕೆರೆ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು, ನಿಡಗುಂದಿಕೊಪ್ಪದ ಶಿವಬಸವ ಸ್ವಾಮೀಜಿ, ಯಲಬುರ್ಗದ ಬಸವಲಿಂಗ ಶ್ರೀಗಳು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ್, ಸಿ.ಕೆ. ಸುಂಕದ, ಪಿ.ಬಿ. ಅಳಗವಾಡಿ ಉಪಸ್ಥಿತರಿದ್ದರು. ಶಾಸಕ ಜಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಥುನ ಪಾಟೀಲ ಸ್ವಾಗತಿಸಿದರು. ವೀರಯ್ಯ ಸೋಮನಕಟ್ಟಿಮಠ ಕಾರ್ಯಕ್ರಮ ನಿರೂಪಿಸಿದರು. ಐ.ಎಸ್. ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement