ರೈತರ ಸಾಲ ಪಾವತಿಗೆ ಕಾಲಾವಕಾಶ ನೀಡಿ
ಕನ್ನಡಪ್ರಭ ವಾರ್ತೆ. ಗದಗ, ಜ. 7
ಜಿಲ್ಲೆಯಲ್ಲಿ ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆಯಾಗಿರುವ ಪ್ರದೇಶದ ವ್ಯಾಪ್ತಿಯಲ್ಲಿ ಬ್ಯಾಂಕ್ಗಳು ನೀಡಿರುವ ಸಾಲವನ್ನು ಪಾವತಿಸುವಂತೆ ರೈತರನ್ನು ಒತ್ತಾಯಿಸಬಾರದು ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.
ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಲೀಡ್ ಬ್ಯಾಂಕ್ನ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ರೈತರು ಬರ ಎದುರಿಸುತ್ತಿದ್ದಾರೆ. ವಿವಿಧ ಬ್ಯಾಂಕ್ಗಳು ರೈತರಿಗೆ ಕೃಷಿಗಾಗಿ ನೀಡಿರುವ ಸಾಲವನ್ನು ತಡವಾಗಿ ತುಂಬಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಲಕ್ಕುಂಡಿ ಹಾಗೂ ಡಂಬಳ ಗ್ರಾಮಗಳು ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಇದರ ಅನುಗುಣವಾಗಿ ಈ ಗ್ರಾಮಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ತೆರೆಯಲು ಸೂಚಿಸಿದರು. ಇದಕ್ಕುತ್ತರಿಸಿದ ಬ್ಯಾಂಕ್ ಅಧಿಕಾರಿಗಳು ಲಕ್ಕುಂಡಿಯಲ್ಲಿ ಸಿಂಡಿಕೇಟ್ ಹಾಗೂ ಡಂಬಳದಲ್ಲಿ ಕೆವಿಜಿ ಬ್ಯಾಂಕ್ ಇದೆ ಎಂದರು.
ಈ ಕುರಿತು ಚರ್ಚಿಸಿದ ಸಂಸದ ಉದಾಸಿ, ಈ ಗ್ರಾಮಗಳಲ್ಲಿ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಜನತೆ ಹೊಂದಿರುವುದರಿಂದ ಲಕ್ಕುಂಡಿಯಲ್ಲಿ ಎಸ್ಬಿಐ ಹಾಗೂ ಡಂಬಳದಲ್ಲಿ ರಾಷ್ಟ್ರೀಕೃತ ಯಾವುದಾದರೊಂದು ಬ್ಯಾಂಕ್ ತೆರೆಯುವಂತೆ ಸೂಚನೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುದಾನಕ್ಕಾಗಿ ಖಾತೆ ತೆರೆಯುವ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗಬಾರದು. ಸರ್ಕಾರದ ಕೆಲ ಯೋಜನೆಗಳ ಫಲಾನುಭವಿಗಳ ಖಾತೆಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗದಂತೆ ಬ್ಯಾಂಕ್ ಅಧಿಕಾರಿಗಳು ನೋಡಿಕೊಳ್ಳಿ ಎಂದರು.
ಎಲ್ಆರ್ಸಿ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಗುತ್ತಿಗೆ ನೌಕರರು, ಕ್ಲರ್ಕ್ಗಳನ್ನು ಕಳುಹಿಸುತ್ತಿರುವ ಕುರಿತು ಜಿಪಂ ಯೋಜನಾಧಿಕಾರಿ ಟಿ. ದಿನೇಶ ಸಭೆಯ ಗಮನಕ್ಕೆ ತಂದರು. ಇದರಿಂದಾಗಿ ಸಂಸದ ಉದಾಸಿಯವರು ಸಂಬಂಧಿಸಿದ ಅಧಿಕಾರಿಗಳ ಕುರಿತು ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ಹಿರಿಯ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಇಲ್ಲದಿದ್ದರೆ, ಅಂತಹವರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಕೋಲಕಾರ್, ಆರ್ಬಿಐ ಅಧಿಕಾರಿ ಆರ್.ಪಿ. ಚೌಧರಿ, ನರಸಿಂಹಲು, ನಬಾರ್ಡ್ನ ಶ್ರವಣಕುಮಾರ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ ಮುಂತಾದವರು ಉಪಸ್ಥಿತರಿದ್ದರು.