ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಿ
ಕನ್ನಡಪ್ರಭ ವಾರ್ತೆ, ಗದಗ, ಜ. 7
ಲಕ್ಷ್ಮೇಶ್ವರದ ದಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಾಣಿಜ್ಯ ಬ್ಯಾಂಕುಗಳಿಂದ ರೈತರಿಗೆ ಸಾಲ ಕಟ್ಟಲು ಬರುತ್ತಿರುವ ಒತ್ತಡ ತಡೆಗಟ್ಟಲು ಆಗ್ರಹಿಸಿ ಸೋಮವಾರ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗದಗ ಜಿಲ್ಲಾ ವ್ಯಾಪ್ತಿಗೊಳಪಡಿಸಿದ ತಾಲೂಕುಗಳು ಸತತ ಬರಗಾಲದಿಂದ ತತ್ತರಿಸುತ್ತಲಿವೆ. ಇಂತಹ ಬರಗಾಲಕ್ಕೆ ಸಿಲುಕಿದ ರೈತ ಸಮುದಾಯ ತಮ್ಮ ಹೊಟ್ಟೆಪಾಡಿಗಾಗಿ ಪರಿತಪಿಸುವಂಥ ಸ್ಥಿತಿ ಬಂದಿದೆ.
ಇಂತಹ ಸ್ಥಿತಿಯಲ್ಲಿ ಲಕ್ಷ್ಮೇಶ್ವರದಲ್ಲಿರುವ ದಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದವರು ರೈತರಿಗೆ ನೋಟಿಸ್ ಜಾರಿ ಮಾಡಿ ಸಾಲ ಕಟ್ಟಲಿಕ್ಕೆ ಪ್ರೇರೇಪಿಸುತ್ತಿದ್ದಾರೆ. ಈ ಹಿಂದೆ ಶಿರಹಟ್ಟಿ ತಾಲೂಕು ರೈತರು ವಾಣಿಜ್ಯ ಬ್ಯಾಂಕ್ಗಳಿಂದ ತಮ್ಮ ಕೃಷಿ ಚಟುವಟಿಕೆಗೆ ಸಾಲ ತಗೆದುಕೊಂಡಿರುವುದು ನಿಜ. ಆದರೆ, ಬರಗಾಲದ ಬವಣೆಯಿಂದ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿ ರೈತರು ಬ್ಯಾಂಕ್ಗಳಿಂದ ಪಡೆದ ಹಣ ಮರುಪಾವತಿ ಮಾಡುವಲ್ಲಿ ಅಲ್ಪ ಪ್ರಮಾಣದ ವಿಳಂಬವಾಗಿದೆ.
ಕೊಟ್ಟ ಸಾಲ ತೀರಿಸಬಾರದು ಎಂಬ ಬಯಕೆ ಯಾವ ರೈತರಿಗೂ ಇಲ್ಲ. ಆದರೆ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಪಡೆದ ಹಣ ಮರುಪಾವತಿ ಮಾಡುವಂತೆ ಬ್ಯಾಂಕ್ನ ಅಧಿಕಾರಿಗಳು ನೋಟಿಸ್ ನೀಡಿ ಒತ್ತಾಯಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಹೆಚ್ಚಾಗಿ ವಾಣಿಜ್ಯ ಬ್ಯಾಂಕ್ಗಳು ರೈತರಿಗೆ ಹಣ ತುಂಬುವಂತೆ ತಾಕೀತು ಮಾಡುವುದರಿಂದ ಆತಂಕಕೊಳಗಾಗುವ ರೈತ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಲಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ವಾಣಿಜ್ಯ ಬ್ಯಾಂಕ್ನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ರೈತರ ಬಾಕಿ ಹಣ ತುಂಬಲು ಕಾಲಾವಕಾಶ ನೀಡುವಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ಚಿನ್ನಯ್ಯ ಅಮಾಗಿಮಠ, ಬಾಳೇಸಾಬ್ ನದಾಫ್, ಜಿ.ಎಫ್. ತೆವರಿ, ಎಸ್.ಬಿ. ಸಗಣಿ, ಕೊಟ್ರಪ್ಪ ಅಂಗಡಿ, ದೇವಪ್ಪ ಮೇಟಿ, ಸಿ.ಎಸ್.ಪಾಟೀಲ, ರಾಮಣ್ಣ ಗಾಂಜಿ, ಎಸ್.ಸಿ. ಮುದಕಣ್ಣವರ, ಎನ್.ಬಿ. ಪಾಟೀಲ, ಶಿವಬಸಪ್ಪ ಮೂಕಿ, ವಿ.ಬಿ. ಮಾಗಡಿ, ಬಸಪ್ಪ ಮಾಗಡಿ, ದೇವಪ್ಪ ಮಾಗಡಿ, ವಿ.ಸಿ. ಸಕ್ರಣ್ಣವರ, ಮಹಾದೇವಪ್ಪ, ಸುಲೇಮಾನ ನದಾಫ ಮುಂತಾದವರು ಉಪಸ್ಥಿತರಿದ್ದರು.