ವಾಣಿಜ್ಯ ಮಳಿಗೆಗಳ ಉದ್ಘಾಟನೆ ಯಾವಾಗ?
-ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ, ನರಗುಂದ, ಜ. 7
ತಾಲೂಕಿನ ಭೈರನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲಿ ವ್ಯಾಪಾರ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉದ್ಘಾಟನೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಗ್ರಾಮದ ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯವೇ?: ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮಾರಾಟ ಮಳಿಗೆ 2011-12 ನೇ ಸಾಲಿನ ಸ್ವರ್ಣ ಜಯಂತಿ ಗ್ರಾಮ ಸ್ವ ರೋಜಗಾರ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಮುಗಿದು ವರ್ಷಗಳೇ ಗತಿಸಿದರೂ ಅವುಗಳಿಗೆ ಉದ್ಘಾಟನೆ ಭಾಗ್ಯವೇ ದೊರೆತಿಲ್ಲ.
ಮಳಿಗೆಗಳನ್ನು ಸಕಾಲದಲ್ಲಿ ಉದ್ಘಾಟನೆ ಮಾಡಿ, ವ್ಯಾಪಾರಕ್ಕೆ ನೀಡಿದಲ್ಲಿ ಗ್ರಾಪಂಗೆ ಆದಾಯ ಬರುತ್ತದೆ. ಆದರೆ ಇದರ ಬಗ್ಗೆ ಗಮನ ನೀಡಬೇಕಾದ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯವೇ ಸಮಸ್ಯೆಗೆ ಮೂಲ ಕಾರಣವಾಗಿದೆ.
ದುರುಪಯೋಗ: ಮಳಿಗೆಗಳು ನಿರ್ಮಾಣವಾಗಿ ಹಲವು ವರ್ಷಗಳಾದರೂ ಅದನ್ನು ಸಕಾಲದಲ್ಲಿ ಉದ್ಘಾಟನೆ ಮಾಡದೇ ಇರುವುದರಿಂದ ಅವುಗಳ ಹಾಳಾಗುವ ಸ್ಥಿತಿ ಒಂದೆಡೆ ನಿರ್ಮಾಣವಾದರೆ.
ಇನ್ನೊಂದೆಡೆ ಅವುಗಳ ದುರುಪಯೋಗವಾಗುವ ಸಾಧ್ಯತೆ ನಿಚ್ಚಳವಾಗಿದೆ. ಗ್ರಾಮಾಂತರ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕೃಷಿ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿದ್ದು, ಅವರೆಲ್ಲ ತಮ್ಮ ಕೃಷಿ ಚಟುವಟಿಕೆಗಳ ಪರಿಕರ ಸೇರಿದಂತೆ ಅಗತ್ಯ ವಸ್ತುಗಳನ್ನು ಮಳಿಗೆಗಳ ಮುಂಭಾಗದಲ್ಲಿಯೇ ಸಂಗ್ರಹಿಸಿಡುತ್ತಿದ್ದು. ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಅವುಗಳ ದುರುಪಯೋಗವಾಗುವ ಸಾಧ್ಯತೆ ಹೆಚ್ಚಾಗಿದೆ.
ಜಾರಿಕೊಳ್ಳುವುದು
ಭೈರನಹಟ್ಟಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮಾರಾಟ ಮಳಿಗೆಗಳನ್ನು ನಮಗೆ ವ್ಯಾಪಾರ ಮಾಡಲು ನೀಡಿ ಎಂದು ಹಲವಾರು ಬಾರಿ ಗ್ರಾಮದ ಯುವಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅಧಿಕಾರಿಗಳು ಇದಕ್ಕೆ ಸಮರ್ಪಕ ಉತ್ತರ ನೀಡದೇ, ಇದು ನಮ್ಮ ವ್ಯಾಪ್ತಿಗೆ ಬಂದಿಲ್ಲ ಎನ್ನುವ ಸಿದ್ದ ಉತ್ತರವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
- ಭೈರನಹಟ್ಟಿ ಗ್ರಾಮಸ್ಥರು