ವಾಲ್ಮೀಕಿ ಸಮಾವೇಶಕ್ಕೆ 8 ಸಾವಿರ ಜನ: ಶಿವನಗೌಡ ಪಾಟೀಲ
ಲಕ್ಷ್ಮೇಶ್ವರ: ಜ. 11ರಂದು ಚಿತ್ರದುರ್ಗದಲ್ಲಿ ನಡೆಯವ ರಾಜ್ಯ ಮಟ್ಟದ ವಾಲ್ಮೀಕಿ ಸಮಾವೇಶ ಹಾಗೂ ಮುಖ್ಯಮಂತ್ರಿ ಸನ್ಮಾನ ಸಮಾರಂಭಕ್ಕೆ ಶಿರಹಟ್ಟಿ ತಾಲೂಕಿನಿಂದ ಸುಮಾರು 8 ಸಾವಿರ ಜನರು ಹೋಗುವ ನಿರೀಕ್ಷೆಯಿದೆ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು. ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿಯವರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಸಮಾವೇಶಕ್ಕೆ ತಯಾರಿ ನಡೆಸಿದ್ದು, ಶಿರಹಟ್ಟಿ ತಾಲೂಕಿನಿಂದ ಸುಮಾರು 8 ಸಾವಿರ ಜನ ಹೋಗುವ ನಿರೀಕ್ಷಯಿದೆ. ರಾಜ್ಯದ ಅಬಕಾರಿ ಸಚಿವ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಸಮಾವೇಶದಲ್ಲಿ ತಾಲೂಕಿನ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಯನ್ನು ಅರ್ಪಿಸಲಾಗುವುದು. ವಾಲ್ಮೀಕಿ ಪಂಗಡದ ಉಪ ಜಾತಿಗಳಾದ ತಳವಾರ ಹಾಗೂ ಪರಿವಾರ ಜಾತಿಯವರಿಗೆ ಎಸ್ಟಿ ಮೀಸಲಾತಿಯನ್ನು ನೀಡುವುದು, ಈಗಿರುವ ಶೇ. 3ರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದು, ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ ಎಸ್ಟಿ ಮಹಿಳೆಯರಿಗೆ ಮಾತ್ರ ಮೀಸಲಾತಿ ನೀತಿಯಿದ್ದು, ಪುರುಷರಿಗೆ ಯಾವುದೇ ಚುನಾವಣೆಯಲ್ಲಿ ಮೀಸಲಾತಿಯನ್ನು ನಿಗದಿ ಮಾಡಿರುವುದಿಲ್ಲ, ಅದಕ್ಕಾಗಿ ಎಸ್ಟಿ ಪುರುಷರಿಗೆ ಚುನಾವಣೆಯಲ್ಲಿ ಮೀಸಲಾತಿಯನ್ನು ನಿಗದಿ ಮಾಡುವಂತೆ ಕೋರುವುದು ಹೀಗೆ ಇನ್ನೂ ಅನೇಕ ಬೇಡಿಕೆಗಳನ್ನು ಸಲ್ಲಿಸಲಾಗುವುದು. ಕಾರಣ ತಾಲೂಕಿನ ವಾಲ್ಮೀಕಿ ಸಮಾಜ ಬಾಂಧವರು ತಪ್ಪದೇ ಸಮಾವೇಶಕ್ಕೆ ಆಗಮಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ತಳವಾರ, ಬಸವರಾಜ ಕುಬಸದ, ಸುರೇಶ ಮಾಗಡಿ, ನೀಲಪ್ಪ ಪಶುಪತಿಹಾಳ, ಮಲ್ಲಪ್ಪ ಸೊರಟೂರ, ಬಸನಗೌಡ ಪಾಟೀಲ, ಮಂಜುನಾಥ, ರಾಜು ಮೇಲ್ಮುರಿ, ದೇವಪ್ಪ ತಳವಾರ, ಉಡಚಪ್ಪ ತಳವಾರ ಮುಂತಾದವರಿದ್ದರು.