ಹರ್ಡೇಕರ ಮಂಜಪ್ಪ ನಾಡಿನ ವಿಶಿಷ್ಟ ಚೇತನ
ಕನ್ನಡಪ್ರಭ ವಾರ್ತೆ, ಗದಗ, ಜ. 7
ಹರ್ಡೇಕರ ಮಂಜಪ್ಪನವರದು ಸರ್ವಜ್ಞನಂತೆ ಅನಿಕೇತನ ಪ್ರಜ್ಞೆ ಪರಿವಾಜಕ ಪ್ರವೃತ್ತಿ ಅವರು ಶರಣ ಸಾಹಿತ್ಯಕ್ಕೆ, ಮಕ್ಕಳ ಸಾಹಿತ್ಯಕ್ಕೆ, ಪತ್ರಿಕೋದ್ಯಮ, ಸಮಾಜ ಸೇವೆ, ಶೈಕ್ಷಣಿಕ ರಂಗಕ್ಕೆ ನೀಡಿದ ಕೊಡುಗೆ ಯಾವ ನಿಟ್ಟಿನಿಂದ ನೋಡಿದರೂ ಅನುಪಮವಾದುದು. ಈ ನಾಡು ಕಂಡ ವಿಶಿಷ್ಟ ಚೇತನಗಳಲ್ಲಿ ಅವರೂ ಒಬ್ಬರು ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಕವಿ, ಸಾಹಿತಿ ಡಾ. ರಾಜೇಂದ್ರ ಗಡಾದ ಅಭಿಪ್ರಾಯ ಪಟ್ಟರು.
ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವದಳ ಆಶ್ರಯದಲ್ಲಿ ಈಚೆಗೆ ನಗರದ ಬಸವ ಮಂಟಪದಲ್ಲಿ ಏರ್ಪಡಿಸಿದ್ದ 1053ನೇ ಶರಣ ಸಂಗಮದ ನಿಮಿತ್ತ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ಹಾಗೂ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನೆನಹು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಅಂದಾನೆಪ್ಪ ವಿಭೂತಿ ಮಾತನಾಡಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕಾವ್ಯ ವಿಮರ್ಶೆ, ವ್ಯಕ್ತಿ ಚಿತ್ರಣ ಪ್ರವಾಸ ಸಾಹಿತ್ಯಕ್ಕೆ ಅಪೂರ್ವವಾದ ಕೃತಿಗಳನ್ನು ನೀಡಿದ್ದು, ಇವೆಲ್ಲವೂ ತುಂಬಾ ಮಹತ್ವದ ಗ್ರಂಥಗಳಾಗಿವೆ. ಅವರೊಬ್ಬ ಮಹಾನ ವಿದ್ವಾಂಸರಾಗಿದ್ದರು ಎಂದರು.
ಬಸವದಳದ ಅಧ್ಯಕ್ಷ ಎಂ.ಬಿ. ಲಿಂಗದಾಳ, ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಸುಂಕದ, ಎನ್.ಎಸ್. ಹಕಾರಿ, ಬಿ.ಬಿ. ಕಾಮಣ್ಣವರ, ಎನ್.ಎಸ್. ಹಿರೇಸಕ್ಕರಗೌಡರ, ವೀರಭದ್ರಪ್ಪ ಕೆಂಭಾವಿ, ಕೆ.ವಿ. ಗೋಣಿ, ಎಸ್.ಎ. ಪಾಟೀಲ, ಚನ್ನಬಸವ, ಬಸವರಾಜ ಅಂಗಡಿ, ಪಾರ್ವತೆಮ್ಮ ಅಂಗಡಿ, ಗಿರಿಜಕ್ಕ ಧರ್ಮರಡ್ಡಿ, ಶ್ರೀದೇವಿ ಪಾಟೀಲ, ಸರೋಜಕ್ಕ ಮುಗದ, ನಾಗರತ್ನಾ ಅಸುಂಡಿ, ಲಕ್ಷ್ಮೀದೇವಿ ಅಂಗಡಿ ಮುಂತಾದವರು ಉಪಸ್ಥಿತರಿದ್ದರು. ಸರೋಜಾ ಮುಗದ ಪ್ರಾರ್ಥಿಸಿದರು. ಎಸ್.ಎ. ಮುಗದ ಸ್ವಾಗತಿಸಿದರು. ಕಿರಣ ನಿರೂಪಿಸಿದರು.