ಸನ್ಮಾರ್ಗದತ್ತ ನಡೆಸುವುದೇ ಶಿವಾನುಭವ
ಕನ್ನಡಪ್ರಭ ವಾರ್ತೆ, ಗದಗ, ಜ. 8
ಇಂದಿನ ಯುಗದಲ್ಲಿ ಮನುಷ್ಯ ಸ್ವಧರ್ಮ, ನ್ಯಾಯ, ನೀತಿಗಳನ್ನು ಅಲಕ್ಷಿಸಿ ಗಳಿಕೆ ಮಾರ್ಗವನ್ನು ಅನುಸರಿಸುತ್ತಿದ್ದಾನೆ. ಅಂತಹ ಮನುಷ್ಯನನ್ನು ದುರ್ಮಾರ್ಗದಿಂದ ಸನ್ಮಾರ್ಗದೆಡೆಗೆ ಕೊಂಡೊಯ್ಯುವುದೇ ಶಿವಾನುಭಗಳ ಮಹತ್ವ ಎಂದು ಕೇದಾರಸ್ವಾಮಿ ಜುಕ್ತಿಹಿರೇಮಠ ಹೇಳಿದರು.
ಸೋಮವಾರ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಜುಕ್ತಿಹಿರೇಮಠದಲ್ಲಿ ಜರುಗಿದ 201ನೇ ಶಿವಾನುಭವ ಹಾಗೂ ಶ್ರೀಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳ ಭಾವಚಿತ್ರವಿರುವ 2014ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ಪೂಜ್ಯರ ಮಠ ಮಾನ್ಯಗಳಿಗೆ ತನು, ಮನ, ಧನದಿಂದ ಸೇವೆ ಸಲ್ಲಿಸಿರುವುದರಿಂದ ಆ ಸೇವೆಯ ಪ್ರತಿಫಲ ಮುಂದಿನ ಮೂರು ತಲೆಮಾರಿನವರೆಗೆ ಕರೆದೊಯ್ಯುವುದು. ಶಿವಾನುಭವಗಳು ಪೂಜ್ಯರ, ಮಠದ ಪ್ರತಿಷ್ಠೆಗಾಗಿ ಅಲ್ಲ. ಭಕ್ತರ ಉದ್ಧಾರಕ್ಕಾಗಿ ಜರುಗುತ್ತಿವೆ. ಲೆಕ್ಕಿ ಕಂಡಲ್ಲಿ ಮೂಸಿ ಅಕ್ಕ ಕಂಡಲ್ಲಿ ಮಾತನಾಡಿಸಿ ಎಂಬ ಗಾದೆಯೆಂತೆ ಲೆಕ್ಕಿ ಎಂಬುದು ಆಯುರ್ವೇದದ ಗಿಡಮೂಲಿಕೆ ಅದನ್ನು ಮೂಸುವುದರಿಂದ ಮನುಷ್ಯನಲ್ಲಿಯ 32 ಪ್ರಕಾರದ ರೋಗ ವಾಸಿಯಾಗುತ್ತವೆ. ಇನ್ನು ಅಕ್ಕ ಕಂಡಲ್ಲಿ ಮಾತನಾಡಿಸುವುದರಿಂದ ಪ್ರೀತಿ, ಬಾಂಧವ್ಯ, ವಾತ್ಸಲ್ಯ, ಗಟ್ಟಿಗೊಳ್ಳುತ್ತದೆ. ಇಂತಹ ಮುಖ್ಯ ವಿಚಾರಗಳು ಶಿವಾನುಭವ ಕಾರ್ಯಕ್ರಮಗಳು ಭಕ್ತರ ಜಾಗೃತಿಗಾಗಿ ಕಾರಣವಾಗುವುದರಿಂದ ತಮ್ಮೊಂದಿಗೆ ತಮ್ಮ ಮಕ್ಕಳನ್ನು ಕರೆ ತಂದು ಸಂಸ್ಕಾರವಂತರನ್ನಾಗಿ ಮಾಡಲು ಕರೆ ನೀಡಿದರು.
ನಿವೃತ್ತ ಶಿಕ್ಷಕ ಶಂಕ್ರಯ್ಯ ಜುಕ್ತಿಹಿರೇಮಠ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶ ಬೇಲಿ, ವೀರಪ್ಪ ಪಡಚಿಂತಿ ಅವರನ್ನು ಗೌರವಿಸಲಾಯಿತು. ಶಿವಾನುಭವ ಸಮಿತಿಯ ಸದಸ್ಯ ಶರಣಪ್ಪ ಕಾಶಪ್ಪನವರ, ಎಸ್.ಎಂ. ಹೂಗಾರ, ವೀರನಗೌಡ ಪಾಟೀಲ, ಶಿವಪ್ಪ ಅಮರಗಟ್ಟಿ, ಉಮೇಶ ಮಾರನಬಸರಿ ಮುಂತಾದವರು ಉಪಸ್ಥಿತರಿದ್ದರು. ಉಮೇಶ ಗುಡಿಮನಿ ನಿರೂಪಿಸಿದರು.