ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

18ಕ್ಕೆ ಮಾಜಿ ಶಾಸಕ ಮುನೇನಕೊಪ್ಪ ಪಾದಯಾತ್ರೆ

Mainashree
Updated On : 10 Jan 2014, 10:48 am

ನವಲಗುಂದ: ನವಲಗುಂದ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮರಳಿ ಚಾಲನೆ ನೀಡುವಂತೆ ಆಗ್ರಹಿಸಿ ಜ. 18ರಂದು ಬಿಜೆಪಿ ಕಾರ್ಯಕರ್ತರು ಹಾಗೂ ರೈತರೊಂದಿಗೆ ಸೇರಿ ಅಳಗವಾಡಿಯಂದ ನವಲಗುಂದವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ನವಲಗುಂದದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಳಗವಾಡಿಯಲ್ಲಿ ಹುತಾತ್ಮ ರೈತನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರೆ ಪ್ರಾರಂಭಿಸಲಾಗುವುದು. ನಂತರ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಕಳೆದ 8 ತಿಂಗಳಲ್ಲಿ ನವಲಗುಂದ ತಾಲೂಕಿನಲ್ಲಿ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಪ್ರಾರಂಭಗೊಂಡಿದ್ದ ಹಲವಾರು ಕಾಮಗಾರಿಗಳನ್ನು ಈಗಿನ ಶಾಸಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಸ್ಥಗಿತಗೊಳಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯ ಬೆರೆಸುವ ಮೂಲಕ ಈಗಿನ ಶಾಸಕರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದು.
ತಾವು ಶಾಸಕರಾಗಿದ್ದಾಗ ತಾಲೂಕಿನಾದ್ಯಂತ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಸುವರ್ಣ ಗ್ರಾಮ ಯೋಜನೆಯಡಿ ಅಳಗವಾಡಿ, ಗುಮ್ಮಗೋಳ, ತಿರ್ಲಾಪೂರ, ಮಣಕವಾಡ, ಹುಬ್ಬಳ್ಳಿ ತಾಲೂಕಿನ ಉಮಚಗಿ, ಮಂಟೂರು, ನಾಗರಹಳ್ಳಿ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ನಡೆದಿದ್ದವು. ಒಟ್ಟು 8 ಹಳ್ಳಿಗಳಲ್ಲಿನ ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ದುರಸ್ತಿಗಾಗಿ ರು. 5 ಕೋಟಿ ಮಂಜೂರಾಗಿತ್ತು.
ತಾಲೂಕಿನ ಸುಮಾರು 10 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರು. 38 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗಿತ್ತು. ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಲ್ಲಿ ತಾಲೂಕಿನ ರೈತರಿಗೆ ಸಾಕಷ್ಟು ಅನುಕೂಲಗಳಾಗುತ್ತಿದ್ದವು. ಆದರೆ ಸ್ಥಳೀಯ ಶಾಸಕರ ಕೀಳುಮಟ್ಟದ ರಾಜಕಾರಣದಿಂದ ಈ ಎಲ್ಲ ಯೋಜನೆಗಳು ಸ್ಥಗಿತಗೊಂಡಿವೆ ಎಂದು ದೂರಿದರು.
ಈ ಹಿಂದೆ ತಮ್ಮ ಅವಧಿಯಲ್ಲಿ ಚಾಲನೆ ನೀಡಿದ್ದ ಹಲವಾರು ಯೋಜನೆಗಳಿಗೆ ಈಗಿನ ಶಾಸಕರು ಅಧಿಕಾರಗಳ ಮೇಲೆ ಒತ್ತಡ ಹೇರಿ ಮತ್ತೊಮ್ಮೆ ಚಾಲನೆ ನೀಡುವ ನಾಟಕವಾಡುತ್ತಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಯೋಜನೆಯನ್ನು ತಾಲೂಕಿಗೆ ತರಲು ಅಸಹಾಯಕರಾಗಿರುವ ಸ್ಥಳೀಯ ಶಾಸಕರು, ತಮ್ಮ ಅವಧಿಯಲ್ಲಿ ಚಾಲನೆ ನೀಡಿದ್ದ ಯೋಜನೆಗಳಿಗೆ ಮತ್ತೊಮ್ಮೆ ಭೂಮಿ ಪೂಜೆ ಮಾಡುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ.
ತಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಅನೇಕ ಅಭಿವೃದ್ಧಿಪರ ಯೋಜನೆಗಳು ಈಗಿನ ಸ್ಥಳೀಯ ಶಾಸಕರ ಕೀಳುಮಟ್ಟದ ರಾಜಕಾರಣದಿಂದಾಗಿ ಸ್ಥಗಿತಗೊಂಡಿವೆ. ಈ ಎಲ್ಲ ಯೋಜನೆಗಳು ಜಾರಿಗೊಂಡಲ್ಲಿ ತಾಲೂಕಿನ ರೈತರು, ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಯಾವುದೇ ಹೊಸ ಯೋಜನೆ ತರಲು ಅಸಹಾಯಕರಾಗಿರುವ ಶಾಸಕರು, ಹಿಂದಿನ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಗಾಲು ಹಾಕುತ್ತಿರುವುದು ಸರಿ ಅಲ್ಲ ಎಂದು ಮಾಜಿ ಶಾಸಕ ಮುನೇನಕೊಪ್ಪ ಹೇಳಿದರು.
ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುವ ಮೂಲಕ ರಾಜಕಾರಣ ಮಾಡುತ್ತಿರುವ ಈಗಿನ ಶಾಸಕರ ವರ್ತನೆ ಸಂಪೂರ್ಣ ಸಂವಿಧಾನ ಬಾಹಿರವಾದದ್ದು. ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳಿ ಚಾಲನೆ ನೀಡುವ ಉದ್ದೇಶದಿಂದ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಹೋರಾಟದ ಮೊದಲ ಹಂತವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಮಲಪ್ರಭಾ ನದಿಯಿಂದ ಇಲ್ಲಿಯ ಕಾಲುವೆಗೆ ಹರಿಯುವ ನೀರು ಜ.5ರಂದು ಸ್ಥಗಿತಗೊಳ್ಳುವ ಮಾಹಿತಿ ಸ್ಥಳೀಯ ಶಾಸಕರಿಗೆ ಗೊತ್ತಿದ್ದರೂ ಬೀದಿಗಿಳಿದು ಹೋರಾಟ ಮಾಡಿದರು. ರೈತರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವ ಶಾಸಕರ ವರ್ತನೆ ಅವರ ಗೌರವಕ್ಕೆ ಯೋಗ್ಯವಾದುದಲ್ಲ. ರೈತರಿಗೆ ಸಹಾಯ ಮಾಡಬೇಕಿರುವ ಶಾಸಕರು, ರೈತರ ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿರುವುದು ಸಮಂಜಸವಲ್ಲ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಎ.ಬಿ. ಹಿರೇಮಠ, ಜಿಪಂ ಸದಸ್ಯ ಅಡಿವೆಪ್ಪ ಮನವಿ, ಸುರೇಶ ಗಾಣಿಗೇರ, ಶಾಂತಾ ನಿಡುವಣ, ಡಾ. ಎಂ.ಬಿ. ಮುನೇನಕೊಪ್ಪ, ನಾಗನಗೌಡ ಪಾಟೀಲ, ಎಸ್.ಬಿ. ದಾನಪ್ಪಗೌಡರ, ತಾಪಂ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟರ, ಮಲ್ಲನಗೌಡ ರಾಚಿಮನಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement