ಬಿ.ಟಿ. ಹತ್ತಿ ಜಮೀನಿಗೆ ಕೃಷಿ ವಿವಿ ತಜ್ಞರ ಭೇಟಿ
ನರಗುಂದ: ತಾಲೂಕಿನ ರೈತರು ವಿವಿಧ ಕಂಪನಿಗಳ ಬಿ.ಟಿ. ಹತ್ತಿ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದು, ಈ ಕುರಿತು ರೈತರು ನೀಡಿದ ದೂರಿನ ಆಧಾರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಸಿ ತಜ್ಞರು ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪಟ್ಟಣದ ದಂಡಾಪುರದ ಮೈಲಾರಪ್ಪ ಚಲವಾದಿ, ಮುದ್ಗಣೆಕಿಯ ಗ್ರಾಪಂ ಸದಸ್ಯ ಮಂಜುನಾಥಗೌಡ ಪಾಟೀಲ, ಭೈರನಹಟ್ಟಿಯ ರಂಗಪ್ಪ ತೆಗ್ಗಿನಮನಿ, ಕೊಣ್ಣೂರದ ಬಸವರಾಜ ಯಲಿಗಾರ, ಶಿರೋಳದ ಶಿವಕುಮಾರ ವಸ್ತ್ರದ, ಬಿ.ವಿ. ಕೊಡಬಳ್ಳಿ ಬೆಳೆದ ಹತ್ತಿ ಹೊಲಗಳಿಗೆ ಭೇಟಿ ನೀಡಿದರು. ಈ ಭಾಗದ ರೈತ ಸಮುದಾಯ ಮಹಿಕೋ ಕಂಪನಿಯ ಬಿ.ಟಿ. ಹತ್ತಿ ಬೀಜಗಳಾದ ಕನಕ ಬೀಜ ಬಿತ್ತನೆ ಮಾಡಿ 4-5 ತಿಂಗಳ ಗತಿಸಿದರೂ ಕೂಡ ಬೆಳೆಯಲ್ಲಿ ಕಾಯಿ, ಹೂವು, ಮೊಗ್ಗು ಏಕೆ ಆಗಿಲ್ಲವೆಂದು ಸಸಿ ತಜ್ಞರು ಸಮೀಕ್ಷೆ ನಡೆಸಿ ರೈತರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಸದಸ್ಯ ಯಲ್ಲಪ್ಪ ದೊಡಮನಿ, ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಂಜುನಾಥಗೌಡ ಪಾಟೀಲ, ಚಿದಾನಂದ ಹಾದಿಮನಿ, ಶಿವಪ್ಪ ಬೆಳವಟಿಗಿ, ಶಿವಪುತ್ರಪ್ಪ ಜಾವುರ, ಸಿಬ್ಬಂದಿ ಸಿ.ಪಿ. ಜಾಲಿಹಾಳ, ಚನ್ನಬಸವರಾಜ, ಎಸ್.ಎಸ್. ಕುಲಕರ್ಣೆ, ಇಮಾಮಸಾಬ ನವಲೂರ, ಬಸಪ್ಪ ಭಜಂತ್ರಿ ಹಾಜರಿದ್ದರು.