ವೈದ್ಯರ ಸೇವೆ ಅಮೂಲ್ಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 9
ಭಗವಂತನಿಗೆ ಸಮನಾದ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳು, ಜನರ ಆರೋಗ್ಯ ರಕ್ಷಿಸುವ ವೈದ್ಯರಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಿ ಎಂದು ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಪಿ.ಜಿ. ಸೆಂಟರ್ ಕಾರ್ಯದರ್ಶಿ ಅಜೀತಕುಮಾರ ಬಾಗಮಾರ ಹೇಳಿದರು.
ಸ್ಥಳೀಯ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಪಿ.ಜಿ. ಸೆಂಟರ್ ವತಿಯಿಂದ ನಡೆದ ಬಿಎಎಂಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ನಾನಾ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಇಲ್ಲಿ ಪಡೆದ ವಿದ್ಯೆಯನ್ನು ನಿಸ್ವಾರ್ಥ ಭಾವನೆಯಿಂದ ಗ್ರಾಮೀಣ ಬಡ ಜನತೆಗೆ ಸೇವೆ ಮೀಸಲಿಡಿ. ವೈದ್ಯರ ಕೊರತೆಯಿಂದಾಗಿ ಗ್ರಾಮೀಣ ಬಡಜನ ಆರೋಗ್ಯ ಸೇವೆಯಿಂದ ವಂಚಿರಾಗುತ್ತಿದ್ದಾರೆ. ಇಂತವರ ಬಾಳಿಗೆ ಬೆಳಕಾಗಿ, ಆರೋಗ್ಯವಂತ ಸಮಾಜ ಕಟ್ಟಲು ಮುಂದಾಗಿ ಎಂದರು.
ಕಾಲೇಜು ಪ್ರಾಚಾರ್ಯ ಡಾ. ಜೆ.ಐ ಹಿರೇಮಠ ಮಾತನಾಡಿ, ವಿಶ್ವಮಾನ್ಯತೆ ಪಡೆದ ಭಾರತೀಯ ಆಯುರ್ವೇದಿಕ್ ವೈದ್ಯಕೀಯ ಚಿಕಿತ್ಸೆ ಗ್ರಾಮೀಣ ಪ್ರದೇಶ ಜನತೆಗೂ ಸಿಗಬೇಕು. ಯುವ ವೈದ್ಯರು ಸೇವಾ ಮನೋಭಾವ ಮೈಗೂಡಿಸಿಕೊಂಡು ಗೌರವಾನ್ವಿತ ವ್ಯಕ್ತಿಗಳಾಗಿ ಬಾಳಿರಿ ಎಂದರು.
ತಾರಾಬಾಯಿ ಬಾಗಮಾರ, ಡಾ. ರೇಶ್ಮಾ ಕೋಲಕಾರ, ಆನಂದ ಆದಿ, ಎ.ಡಿ. ಕೋಲಕಾರ, ಶ್ರೀನಿವಾಸ ಬೆಡಗಿ, ಕೆ.ಎಸ್. ಬೆಲ್ಲದ, ವಿ.ಎಂ. ಕಾತರಕಿ, ಡಾ. ಮಾಡಲಗೇರಿ, ವಿ.ಎಸ್. ಕಂಟಿ, ಉಪಸ್ಥಿತರಿದ್ದರು.
ಕವಿತಾ ಕೆ.ಎಸ್. ಸ್ವಾಗತಿಸಿದರು. ಪೂಜಾರಾಣಿ ನಿರೂಪಿಸಿದರು. ಪಿ.ಕೆ. ಬೆಲ್ಲದ ವಂದಿಸಿದರು.