ಶೀಘ್ರ ಅರ್ಜಿ ವಿಲೇವಾರಿಯೇ ಗ್ರಾಹಕ ರಕ್ಷಣಾ ಕಾಯ್ದೆ ಉದ್ದೇಶ
ಕನ್ನಡಪ್ರಭ ವಾರ್ತೆ, ಗದಗ, ಜ. 9
ಗ್ರಾಹಕರಿಗೆ ಅತಿ ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯ ಒದಗಿಸುವ ದೃಷ್ಟಿಯಿಂದ ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಹಕ ನ್ಯಾಯಾಲಯಗಳನ್ನು ಹೊಂದಿದೆ ಎಂದು ಗದಗ ಜಿಲ್ಲಾ ಗ್ರಾಹಕ ವೇದಿಕೆ ಅಧ್ಯಕ್ಷ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ. ದುರ್ಗಪ್ಪ ತಿಳಿಸಿದರು.
ಗದಗ ವಾಣಿಜ್ಯೋದ್ಯಮ ಸಂಸ್ಥೆ ಸಭಾಭವನದಲ್ಲಿ ಆಹಾರ, ಕಾನೂನು ಮಾಪನ ಹಾಗೂ ಆಹಾರ ನಿಗಮ ಮತ್ತು ವಿವಿಧ ಎಲ್‌ಪಿಜಿ ಕಂಪನಿಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕ ವೇದಿಕೆಗಳು ಆದೇಶಿಸುವ ಪರಿಹಾರ ವಿಳಂಬವಾದಲ್ಲಿ ಸಂಬಂಧಿತರಿಗೆ ರು. 3 ವರ್ಷಗಳ ಶಿಕ್ಷೆ ವಿಧಿಸುವ ಅಧಿಕಾರ ಗ್ರಾಹಕ ನ್ಯಾಯಾಲಯಗಳಿಗಿದೆ. ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ, ಆದರೆ ಪಾಲನೆಯಾಗುತ್ತಿಲ್ಲ. ಮೂಲಭೂತವಾಗಿ ಶಾಲಾ ಪಠ್ಯದಲ್ಲಿ ಮಕ್ಕಳಿಗೆ ಆರೋಗ್ಯ, ನೈತಿಕ ಮೌಲ್ಯ, ಪ್ರಾಮಾಣಿಕತೆ ಕುರಿತ ಕಲಿಕೆ ಇಲ್ಲದಿರುವುದು ಪರಿಸ್ಥಿತಿ ಇನ್ನಷ್ಟು ವಿಷಮವಾಗಲು ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನ್ಯಾಯವಾದಿ ಎಸ್.ಕೆ. ಪಾಟೀಲ, ಗ್ರಾಹಕರು ಹೆಚ್ಚಾಗಿ ಜನ ಆಹಾರಕ್ಕೆ ಸಂಬಂಧಿತ ವಿಷಯಗಳ ಕುರಿತು ಶೋಷಣೆಗೆ ಒಳಗಾಗುತ್ತಾರೆ. ಕಲಬೆರಕೆ, ತೂಕದಲ್ಲಿ ಮೋಸ, ಗುಣಮಟ್ಟದಲ್ಲಿ ವ್ಯತ್ಯಾಸ, ಪೊಟ್ಟಣಗಳ ಮೇಲೆ ತಿಳಿಸಿದ ಅಂಶಗಳಂತೆ ಇರದಿರುವ ನ್ಯೂನತೆಗಳ ಕುರಿತು ಗ್ರಾಹಕರು ಪರಿಹಾರ ಪಡೆಯಬಹುದು ಎಂದರು.
ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಗ್ರಾಹಕರೇ ಪ್ರಮುಖವಾಗಿರುವ ಇಂದಿನ ಸ್ಥಿತಿಗತಿಗಳಲ್ಲಿ ಬೆಲೆಗೆ ತಕ್ಕ ಪದಾರ್ಥ ಅಥವಾ ಸೇವೆ ಇರಬೇಕು ಎನ್ನುವುದು ಗ್ರಾಹಕರ ಕಾಯ್ದೆ ಉದ್ದೇಶ. ತೂಕದ ಯಂತ್ರಗಳು ಅಧುನಿಕವಾಗಿದ್ದರೂ ಗ್ರಾಹಕರು ಸದಾ ಜಾಗ್ರತೆಯಿಂದಿರಬೇಕು ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಮುಂತಾದವರು ಮಾತನಾಡಿದರು.
ಗ್ರಾಹಕ ರಕ್ಷಣಾ ಪರಿಷತ್ ಸದಸ್ಯೆ ಜಯಶ್ರೀ ಹಿರೇಮಠ, ಕಾನೂನು ಮಾಪನ ಇಲಾಖೆಯ ಎನ್.ಬಿ. ಮಾರನಬಸರಿ ವೇದಿಕೆ ಮೇಲಿದ್ದರು. ಅಶೋಕ ಕಲಘಟಗಿ ಸ್ವಾಗತಿಸಿದರು.