ಸಚ್ಚಿದಾನಂದ ಶ್ರೀಗಳ 83ನೇ ಜಯಂತ್ಯುತ್ಸವ: ಶರಣ ಸಂಸ್ಕೃತಿ ಉತ್ಸವ
ನರಗುಂದ: ತಾಲೂಕಿನ ಬೆಳ್ಳೇರಿ ಗ್ರಾಮದ ಶಿವಾನಂದ ಮಠದ ಸಚ್ಚಿದಾನಂದ ಶ್ರೀಗಳ 83ನೇ ಜಯಂತ್ಯುತ್ಸವದ ಅಂಗವಾಗಿ ಮೂರು ದಿನ ಗ್ರಾಮದ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಸಲಾಗುವುದೆಂದು ಸ್ವಾಗತ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಈಳಗೇರ ಹೇಳಿದರು. ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳ್ಳೇರಿ ಶಿವಾನಂದ ಮಠದ ಅಧ್ಯಾತ್ಮ ಹಾಗೂ ಯೋಗ ಜೀವನ ಸಾಧನೆಯ ಮೂರ್ತಿ ಸಚ್ಚಿದಾನಂದ ಶ್ರೀ 83ನೇ ಜಯಂತ್ಯುತ್ಸವದ ಅಂಗವಾಗಿ ಮೂರು ದಿವಸ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ಜ. 9ರಿಂದ ಪ್ರಾರಂಭವಾಗಿದ್ದು, 10, 11ರಂದು ಮುಂದುವರಿಯಲಿದೆ. ತಾಲೂಕಿನಲ್ಲಿ ಪ್ರಥಮ ಶರಣ ಸಂಸ್ಕೃತಿ ಉತ್ಸವ ಇದಾಗಿದೆ ಎಂದರು. ಉತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಲಿಂಗಧಾರಣೆ, ವಚನಗಳ ಕಟ್ಟುಗಳು, ಬಸವಾದಿ ಶರಣರ ವಚನಗ್ರಂಥಗಳ ಮೆರವಣಿಗೆ, ಗ್ರಂಥಗಳಿಗೆ ಪಟ್ಟಾಭಿಷೇಕ, ವೈಚಾರಿಕ ಕಾರ್ಯಕ್ರಮಗಳು ಜರುಗಲಿದ್ದು, ಕಾರ್ಯಕ್ರಮದಲ್ಲಿ ನಾಡಿನ ಮಠಾಧೀಶರು ಮತ್ತು ರಾಜಕೀಯ ನಾಯಕರು ಭಾಗವಹಿಸುವರೆಂದು ಹೇಳಿದರು. ಈ ಸಂದರ್ಭದಲ್ಲಿ ಸಚ್ಚಿದಾನಂದ ಶ್ರೀಗಳು, ಬಸವ ಕೇಂದ್ರ ಅಧ್ಯಕ್ಷ ಚಂಬಣ್ಣ ಕೋರಿ, ಬಸವ ತತ್ವ ನಿಷ್ಠರಾದ ಚನ್ನಬಸಪ್ಪ ಕಂಠಿ, ತಾಪಂ ಸದಸ್ಯರಾದ ವಿ.ಎನ್. ಕೊಳ್ಳಿಯವರು ಹಾಜರಿದ್ದರು.