ಸೂರ್ಯಕಾಂತಿಗೆ ಸಿಗದ ಸೂಕ್ತ ಬೆಲೆ
ಕನ್ನಡಪ್ರಭ ವಾರ್ತೆ, ನರಗುಂದ. ಜ. 9
ನರಗುಂದ ತಾಲೂಕಿನ ರೈತರಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಸದಾ ಬೆಂಬಿಡದ ಭೂತದಂತೆ ಕಾಡುತ್ತಿದ್ದು, ಸದ್ಯ ಕಟಾವು ಮಾಡಿರುವ ಸೂರ್ಯಕಾಂತಿ ಬೆಳೆಗೆ ಸಮರ್ಪಕ ಬೆಳೆ ಸಿಗದಿರುವುದರಿಂದ ರೈತರಲ್ಲಿ ಆತಂಕದೊಂದಿಗೆ ನಮಗೆ ಏಕೆ ಹೀಗಾಗುತ್ತಿದೆ ಎನ್ನುವ ಭಯದ ವಾತಾವರಣ ನಿರ್ಮಾಣವಾಗಿದೆ.
ಅಲ್ಪ ಸ್ವಲ್ಪ ಸುರಿದ ಮಳೆಯನ್ನೇ ಆಧರಿಸಿ ಗೊಬ್ಬರ, ಔಷಧಕ್ಕಾಗಿ ಖರ್ಚು ಮಾಡಿದ್ದು, ರೈತ ಎಕರೆಗೆ 5ರಿಂದ 6 ಚೀಲ ಬೆಲೆ ತೆಗೆದಿದ್ದಾನೆ. ಆದರೆ, ಬಂದಿರುವ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹಾಗಾಗಿ ರೈತರಲ್ಲಿ ಅತೀವ ಬೇಸರಕ್ಕೆ ಕಾರಣವಾಗಿದೆ.
ದ್ವಂದ್ವ ನೀತಿ ಏಕೆ?: ವಾಣಿಜ್ಯ ಬೆಳೆ ಹಾಗೂ ಎಣ್ಣೆ ಬೆಳೆಯಾದ ಸೂರ್ಯಕಾಂತಿಯನ್ನು ಈ ಭಾಗದಲ್ಲಿ ಹೆಚ್ಚಾಗಿ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಾರೆ. ಕಳೆದ ಒಂದು ವಾರದಿಂದ ಸೂರ್ಯಕಾಂತಿ ಬೆಳೆಗೆ ತೀವ್ರವಾದ ಬೆಲೆ ಕುಸಿತವಾಗಿರುವುದಕ್ಕೆ ಕಾರಣವಾದರೂ ಏನು ಎನ್ನುವುದು ಇಲ್ಲಿನ ರೈತರಿಗೆ ತಿಳಿಯದಾಗಿದೆ. ಆದರೆ, ಕೆಲ ರೈತರ ಅಭಿಪ್ರಾಯದಲ್ಲಿ ಸೂರ್ಯಕಾಂತಿ ಬೆಳೆಯಲ್ಲಿನ ಎಣ್ಣೆ ಅಂಶಗಳ ಆಧಾರದಲ್ಲಿಯೇ ಬೆಲೆಯನ್ನು ನಿರ್ಧರಿಸುತ್ತಾರೆ. ಆದರೆ, ಇದರಲ್ಲಿಯೇ ಖಾಸಗಿ ಖರೀದಿದಾರರು ಸಾಕಷ್ಟು ಸಮಸ್ಯೆ ಮಾಡುತ್ತಿದ್ದಾರೆ.
ತೂಕದಲ್ಲಿಯೂ ತೊಂದರೆ: ಸೂರ್ಯಕಾಂತಿ ಕಾಳನ್ನು 50 ಕೆಜಿ ಮಾತ್ರ ತೂಕ ಮಾಡುವವರು ಇದಕ್ಕೆ ಖರೀದಿದಾರರು 1 ಕೆಜಿ ಖಾಲಿ ಚೀಲ, 1 ಕೆಜಿ ಹೊಲಸು (ಸೂರ್ಯಕಾಂತಿಯಲ್ಲಿನ ಕಚ್ಚಾ ವಸ್ತುಗಳು) ಹೀಗೆ ಪ್ರತಿ ಕ್ವಿಂಟಲ್ಗೆ 2 ಕೆಜಿ ಕಡತ ಮಾಡುತ್ತಿದ್ದಾರೆ. ಆದರೆ, ಎಪಿಎಂಸಿ ನಿಯಮದ ಪ್ರಕಾರ 1 ಕೆಜಿ ಮಾತ್ರ ಕಡತ ಮಾಡಬೇಕು. ಆದರೆ, ಖಾಸಗಿ ಖರೀದಿದಾರರು ಮಾತ್ರ ಯಾರು ಏನೇ ಹೇಳಿದರೂ 2 ಕೆಜಿ ಕಡತ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದರೆ. ನಮ್ಮ ಮಾರಾಟ ವ್ಯವಸ್ಥೆ ಹೀಗಿದೆ, ಬೇಕಾದರೆ ಮಾರಾಟ ಮಾಡಿ, ಇಲ್ಲವೇ ಬಿಡಿ ಎನ್ನುತ್ತಾರೆ. ಇದರಿಂದಲೂ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂಬುದು ರೈತರ ಗೋಳು.
ಬೆಲೆಯಲ್ಲೂ ಕುಸಿತ: ಕೇವಲ ಖಾಸಗಿ ವ್ಯಾಪಾರಸ್ಥರಿಂದ ಮಾತ್ರವಲ್ಲ. ಇದರೊಟ್ಟಿಗೆ ಸೂರ್ಯಕಾಂತಿ ಬೆಲೆಯಲ್ಲಿಯೂ ಕುಸಿತವಾಗಿದೆ. ಕಳೆದೊಂದು ವಾರದಲ್ಲಿ ಪ್ರತಿ ಕ್ವಿಂಟಲ್ ಸೂರ್ಯಕಾಂತಿಗೆ ರು. 550ಯಷ್ಟು ಬೆಲೆ ಕುಸಿತವಾಗಿದೆ. ಇನ್ನು ಸೂರ್ಯಕಾಂತಿ ತೆಗೆದಿಟ್ಟು ಮಾರಾಟ ಮಾಡಲು ಹೋದರೆ ಕಾಳಿನಲ್ಲಿನ ತೇವಾಂಶ ಹೊರಟು ಹೋಗಿ ತೂಕದಲ್ಲಿಯೂ ನಷ್ಟವಾಗುತ್ತದೆ. ಹಾಗಾಗಿ ರೈತರಲ್ಲಿ ದ್ವಂದ್ವ ಕಾಡುತ್ತಿದ್ದು, ಮಾರಾಟ ಮಾಡಿದರೂ ನಷ್ಟ ಅನುಭವಿಸುವುದು. ಮಾರಾಟ ಮಾಡದೇ ಮನೆಯಲ್ಲಿಟ್ಟರೂ ನಷ್ಟ ಹೊಂದುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಈ ರೀತಿ ನಿತ್ಯವೂ ಖಾಸಗಿ ವ್ಯಾಪಾರಸ್ಥರು ರೈತರಿಗೆ ನಷ್ಟವನ್ನುಂಟು ಮಾಡುತ್ತಿದ್ದರೂ, ಇವರ ಬಗ್ಗೆ ಗಮನ ನೀಡಬೇಕಾದ ಎಪಿಎಂಸಿ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಹಲವಾರು ಸಂಶಯಕ್ಕೆ ಕಾರಣವಾಗಿದೆ.
ಎಸ್.ಜಿ. ತೆಗ್ಗಿನಮನಿ