ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೌಲಭ್ಯ ವಂಚಿತ ಹೆಬ್ಬಾಳ ಗ್ರಾಮ

Mainashree
Updated On : 10 Jan 2014, 10:59 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 9
ಅದು-ಇದು ಮಾಡ್ತೇವಿ ಅಂತಾ ಆಸೆ ತೋರಿಸಿ ನಮ್ಮಿಂದ ವೋಟು ಪಡೆದು ಆರಿಸಿ ಬರ್ತಾರ. ಅಮ್ಯಾಲ ನಮ್ಮನ್ನ ಮರ್ತ ಬಿಡ್ತಾರ್ರೀ... ಹಿಂಗಾದ್ರ ನಮ್ಮೂರು ಅಭಿವೃದ್ಧಿ ಆಗೋದು ಯಾವಾಗ. ಇದು ತಾಲೂಕಿನ ಹೆಬ್ಬಾಳ ಗ್ರಾಮದ ಜನತೆಗೆ ಕಾಡುತ್ತಿರುವ ಬಹುದಿನದ ಪ್ರಶ್ನೆ.
ಕುಡಿಯಲು ಶುದ್ಧ ನೀರಿಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಬೀದಿ ದೀಪದ ಬೆಳಕಿನ ವ್ಯವಸ್ಥೆ ಇಲ್ಲ, ಓಣಿಗಳಲ್ಲಿ ಸಂಚಾರಕ್ಕೆ ರಸ್ತೆ ಇಲ್ಲ, ಮಹಿಳೆಯರ ಶೌಚಾಲಯ, ಸೂಕ್ತ ಚರಂಡಿ ವ್ಯವಸ್ಥೆ ಹೀಗೆ ಇಲ್ಲಗಳ ಸರಮಾಲೆಯ ಪಟ್ಟಿಯನ್ನೇ ಗ್ರಾಮದ ಜನತೆ ನೀಡುತ್ತಾರೆ.
ಪಾಚಿಗಟ್ಟಿದ ನೀರು: ಸುಮಾರು 4,500 ಜನಸಂಖ್ಯೆ ಹೊಂದಿದ ಹೆಬ್ಬಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಮದಿಂದ ಸುಮಾರು ಒಂದು ಕಿಮೀ ದೂದಲ್ಲಿರುವ ಹಳ್ಳಕ್ಕೆ ಹೋಗಿ ಕುಡಿಯಲು ನೀರು ತರಬೇಕು. ಹಳ್ಳ ಸಂಪೂರ್ಣ ಬತ್ತಿ ಹೋಗಿದ್ದು, ಸಣ್ಣ ಗುಂಡಿಯಲ್ಲಿ ನೀರು ನಿಂತಿದ್ದು, ಅದನ್ನೇ ಕುಡಿಯಲು ಬಳಸಬೇಕು. ನೀರು ಮಾತ್ರ ಸಂಪೂರ್ಣ ಪಾಚಿಗಟ್ಟಿದ್ದು, ಕುಡಿಯಲು ಬಾರದಂತಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ದೂರದ ಹಳ್ಳದಿಂದ ಕೊಡ ಹೊತ್ತು ನೀರು ತರುವುದು ನಿತ್ಯದ ಕಾಯಕವಾಗಿದೆ ಎಂದು ಹಳ್ಳಕ್ಕೆ ನೀರು ತರಲು ಬಂದ ಪುಟ್ಟವ್ವ ಬೂದಿಹಾಳ ತಮ್ಮ ಗೋಳು ತೋಡಿಕೊಂಡರು.
2 ದಿನಕ್ಕೊಮ್ಮೆ ನೀರು: ಹಳ್ಳದ ಒಂದು ಮೂಲಿಯಲ್ಲಿ ಮಾತ್ರ ಸ್ವಲ್ಪ ನೀರು ಕಾಣಿಸುತ್ತಿದ್ದು, ಕೆಲವೇ ದಿನಗಳಲ್ಲಿ ಈ ನೀರು ಬತ್ತಿಹೋಗುವ ಲಕ್ಷಣ ಕಾಣುತ್ತಿದ್ದು, ಕುಡಿಯುವ ನೀರಿನ ತೊಂದರೆಯಾಗುವುದಂತು ನಿಶ್ಚಿತವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಗಳು ಬತ್ತಿವೆ. ನಾಲ್ಕೈದು ಕಡೆ ಕೊಳವೆ ಬಾವಿಯ ವ್ಯವಸ್ಥೆಯಿದ್ದರೂ, ಅನಿಯಮಿತ ವಿದ್ಯುತ್ ಕಡಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿದೆ. ಗ್ರಾಮ ಪಂಚಾಯತಿಯಿಂದ 2 ದಿನಕ್ಕೊಮ್ಮೆ ನಲ್ಲಿ ನೀರು ಬರುತ್ತಿದ್ದು, ಯಾತಕ್ಕೂ ಸಾಲುತ್ತಿಲ್ಲ ಎಂದು ಪಾರ್ವತೆಮ್ಮ ಕುರುಬರ, ಮಾಬೂಬಿ ಡಂಬಳ ತಿಳಿಸುತ್ತಾರೆ.
ಗ್ರಾಮದಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯಗಳಿರದೆ ಮಹಿಳೆಯರು ರಾತ್ರಿಯಾದ ಕೂಡಲೇ ಇಲ್ಲವೇ ಬೆಳ್ಳಂಬೆಳಗ್ಗೆ ಎದ್ದು ಗ್ರಾಮದ ರಸ್ತೆಗೆ ಇಲ್ಲವೇ ಪಕ್ಕದ ಹೊಲಗಳಿಗೆ ಬಯಲು ಶೌಚಕ್ಕೆ ತೆರಳುವ ಅನಿವಾರ್ಯತೆ ಇರುವುದು ಮಹಿಳೆಯರಿಗೆ ಮುಜುಗುರವನ್ನುಂಟು ಮಾಡಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮತ್ತು ಗ್ರಾಮದಲ್ಲಿರುವ ರಸ್ತೆಗಳು ಈವರೆಗೂ ದುರಸ್ತಿ ಕಂಡಿಲ್ಲ. ಸರಿಯಾದ ರಸ್ತೆಗಳಿಲ್ಲದೇ ಅದರಲ್ಲಿಯೇ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಅದು ಅನಿವಾರ್ಯವಾಗಿದೆ.
ಈ ಕುರಿತು ಅಲ್ಲಿನ ನಿವಾಸಿಗಳು ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ. ಹಲವು ಮೂಲ ಸೌಲಭ್ಯಗಳ ಕೊರತೆ ಅನುಭವಿಸುತ್ತಿರುವ ಹೆಬ್ಬಾಳ ಗ್ರಾಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಮುಂದಾಗುವರೇ ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ.

 ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement