ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಜ್ಞಾನ ಬಾಲ್ಯ ವಿವಾಹಕ್ಕೆ ದಾರಿ

Mainashree
Updated On : 11 Jan 2014, 11:27 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 10
ಬಾಲ್ಯ ವಿವಾಹ ನಿಷೇಧದ ಕಾನೂನು ಕಠಿಣವಾಗಿದ್ದರೂ ಅಜ್ಞಾನ ಮತ್ತು ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾರ್ವಜನಿಕರು ಸಮಾಜ ವಿರೋಧಿಯಾಗಿ ಬಾಲ್ಯವಿವಾಹಕ್ಕೆ ಅವಕಾಶ ನೀಡುತ್ತಿರುವುದು ಈ ದೇಶದ ದುರಂತವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಖೇದ ವ್ಯಕ್ತಪಡಿಸಿದರು.
ಗುರುವಾರ ತಾಪಂನ ಸಾಮರ್ಥ್ಯ ಸೌಧದಲ್ಲಿ ಬಾಲ್ಯವಿವಾಹ ನಿಷೇಧ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೌಢ್ಯ ಹಾಗೂ ಆರೋಗ್ಯದ ನಿಷ್ಕಾಳಜಿಯಿಂದಾಗಿ ಮಕ್ಕಳ ಮದುವೆಗಳು ಜರಗುತ್ತವೆ. ಶಿಕ್ಷಣದ ವಿಷಯದಲ್ಲಿ ಸರ್ಕಾರ ಹೆಚ್ಚು ಕಾಳಜಿ ವಹಿಸಿ ಸಮಾಜದಲ್ಲಿ ಮೌಢ್ಯ ತೊಲಗಿಸಲು ಮುಂದಾಗಿದೆ. ವಿವಾಹ ವಿಷಯದಲ್ಲಿ ಆರೋಗ್ಯಕ್ಕೆ ತೊಂದರೆಯಾಗದಂತೆ ಹಾಗೂ ಸಾಮಾಜಿಕವಾಗಿ ಅನಾನುಕೂಲವಾಗದಂತೆ ವಿವಾಹ ವಯಸ್ಸನ್ನು ಸರ್ಕಾರ ನಿಗದಿಗೊಳಿಸಿದೆ. ಆದಾಗ್ಯೂ ಬಾಲ್ಯ ವಿವಾಹಗಳನ್ನು ಮಾಡುತ್ತಿರುವುದು ದುರಂತದ ಸಂಗತಿ. ಇದರಿಂದಾಗಿ ಹುಟ್ಟುವ ಮಕ್ಕಳು ಅನಾರೋಗ್ಯ, ಕಡಿಮೆ ತೂಕ, ಅಂಗವಿಕಲರಾಗುವ ಸಾಧ್ಯತೆ ಇದೆ. ಇಂಥ ಮಕ್ಕಳು ಸಾವನ್ನಪ್ಪುವ ಸಂದರ್ಭ ಅಧಿಕ. ಬಾಲ್ಯ ವಿವಾಹವಾದ ಮಕ್ಕಳ ಹೆರಿಗೆ ಸಂದರ್ಭದಲ್ಲಿ ಗರ್ಭಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಪ್ರಸವ ಸಂದರ್ಭದಲ್ಲಿಯೇ ತಾಯಿಯ ಸಾವಿಗೂ ಕಾರಣವಾಗಬಹುದು. ಬಾಲ್ಯ ವಿವಾಹವಾದ ತಾಯಿಯಿಂದ ಹುಟ್ಟುವ ಮಕ್ಕಳ ಹಾಗೂ ಬಾಣಂತಿಯ ಆರೈಕೆಯೂ ಕಷ್ಟ. ಅಲ್ಲದೆ, ಅವಧಿ ಮುನ್ನವೇ ಮಗು ಜನಿಸಿ ಇದರಿಂದ ಪರಿತಪಿಸಬೇಕಾದೀತು ಎಂದರು.
ಬಿಆರ್‌ಸಿಯ ಸಮನ್ವಯಾಧಿಕಾರಿ ಜಯಶ್ರೀ ಗುಡಿ ಮಾತನಾಡಿ, ಬಾಲ್ಯ ವಿವಾಹದಿಂದ ಮಕ್ಕಳ ಓದಿಗೆ ಬ್ರೇಕ್ ಹಾಕಲಾಗುತ್ತದೆ. ಮಕ್ಕಳ ಕನಸನ್ನು ಕೊಲ್ಲಬೇಕಾಗುತ್ತದೆ. ಎಚ್ಚರ ತಪ್ಪಿದರೆ ಇಡೀ ಕುಟುಂಬವೇ ನೊಂದ ಕಣ್ಣುಗಳಿಂದ ಬಂಧುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಬೀದಿ ನಾಟಕ, ಹಾಡುಗಳು, ಭಿತ್ತಿಚಿತ್ರಗಳ ಮೂಲಕ ಬಾಲ್ಯ ವಿವಾಹದಂತಹ ಸಮಾಜವಿರೋಧಿ ಚಟುವಟಿಕೆ ತಿರಸ್ಕರಿಸುವಂತೆ ಜಾಗೃತಿ ಮೂಡಿಸಿದರೂ ಸಮಾಜ ಜಾಣಕುರುಡು ನೀತಿ ಅನುಸರಿಸುತ್ತಿರುವುದು ಖೇದದ ಸಂಗತಿ ಎಂದರು.
ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ ಕಳ್ಳಿಮನಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸರಸ್ವತಿ ಹೊನ್ನೇಗೌಡರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎನ್. ರಾಟಿ, ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಎ. ಹಿರೇಯಾಳ ಮುಂತಾದವರು ಉಪಸ್ಥಿತರಿದ್ದರು. ಎಂ.ಎಚ್. ವಿರಕ್ತಮಠ ಸ್ವಾಗತಿಸಿದರು. ಕೆ.ಕೆ. ಮಾಳೋದೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement